ಬಸ್ತಾರ್ (ಛತ್ತೀಸ್ಗಢ):ಛತ್ತೀಸ್ಗಢದಲ್ಲಿ ಕಳೆದ 15 ದಿನಗಳಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 29 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಎಲ್ಲೆಡೆ ಬಿಗಿಭದ್ರತೆ ಒದಗಿಸಲಾಗಿದ್ದರೂ ನಾಳೆ (ಶುಕ್ರವಾರ) ಮತದಾನ ನಡೆಯಲಿರುವ ಬಸ್ತಾರ್ ಲೋಕಸಭಾ ಕ್ಷೇತ್ರದ ಸುಕ್ಮಾ ಜಿಲ್ಲೆಯ ಕೆರ್ಲಾಪೆಡಾದ ಮತಗಟ್ಟೆಯಲ್ಲಿ "ಚುನಾವಣಾ ಬಹಿಷ್ಕಾರ" ಮಾಡುವಂತೆ ಜನರಿಗೆ ಎಚ್ಚರಿಸುವ ಬರಹ ಗೀಚಿದ್ದಾರೆ.
ಇದಕ್ಕೂ ಮೊದಲು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡುವ ಕರಪತ್ರಗಳನ್ನು ನಕ್ಸಲೀಯರು ಹಳ್ಳಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಎಸೆದಿದ್ದರು. ಆದರೆ, ಈ ಬಾರಿ ಮತಗಟ್ಟೆ ಕೇಂದ್ರದ ಗೋಡೆ ಮೇಲೆಯೇ ಬಹಿಷ್ಕರಿಸುವಂತೆ ಎಚ್ಚರಿಕೆ ಬರಹ ಬರೆಯಲಾಗಿದೆ. 'ಈ ಮತಗಟ್ಟೆಯಲ್ಲಿ ಯಾರೂ ಮತ ಹಾಕುವಂತಿಲ್ಲ. ಯಾರಿಗಾಗಿ ನಾಯಕರನ್ನು ಆಯ್ಕೆ ಮಾಡಬೇಕು? ನಾಯಕರು ಜನರನ್ನು ವಂಚಿಸುತ್ತಾರೆ' ಎಂದೆಲ್ಲಾ ಬರೆಯಲಾಗಿದೆ. ಬಿಗಿಭದ್ರತೆ ಕೈಗೊಂಡಿರುವ ನಡುವೆಯೂ ನಕ್ಸಲೀಯರು ಈ ಎಚ್ಚರಿಕೆ ನೀಡಿದ್ದು, ಭದ್ರತಾ ಪಡೆಗಳು ಮತ್ತಷ್ಟು ಅಲರ್ಟ್ ಆಗಿವೆ.
ನಾಳೆ ಮತದಾನ:ಬಸ್ತಾರ್ ಲೋಕಸಭೆ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಮತದಾನ ನಾಳೆ ನಡೆಯಲಿದೆ. ಇದು ನಕ್ಸಲೀಯರ ಉಪಟಳ ಹೆಚ್ಚಿರುವ ಪ್ರದೇಶವಾಗಿದೆ. ಹೀಗಾಗಿ ಒಂದೇ ಕ್ಷೇತ್ರಕ್ಕೆ ಮಾತ್ರ ಮೊದಲ ಹಂತದಲ್ಲಿ ಮತದಾನ ನಡೆಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ವರೆಗೆ ಮತದಾನ ನಡೆಯಲಿದೆ. ಕೆರ್ಲಾಪೆಡ ಮತಗಟ್ಟೆಯಲ್ಲಿ 791 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 446 ಮಹಿಳೆಯರು ಮತ್ತು 345 ಪುರುಷರು ಮತದಾರರಿದ್ದಾರೆ.