ಬಿಜಾಪುರ (ಛತ್ತೀಸ್‌ಗಢ) :ರಾಜ್ಯದಲ್ಲಿ ನಕ್ಸಲರು ಮತ್ತೆ ನೆತ್ತರು ಹರಿಸಿದ್ದಾರೆ. ಶೋಧ ಕಾರ್ಯಾಚರಣೆ ಮುಗಿಸಿಕೊಂಡು ಬರುತ್ತಿದ್ದ ಭದ್ರತಾ ಪಡೆ ವಾಹನವನ್ನು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟಿಸಿದ್ದು, 9 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ದೇಶದಲ್ಲಿ ನಕ್ಸಲ್ವಾದ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪಣ ತೊಟ್ಟಿರುವ ನಡುವೆ ಈ ಘೋರ ದುರಂತ ನಡೆದಿದೆ.
ಬಿಜಾಪುರ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಕೆಲ ದಿನಗಳಿಂದ ನಕ್ಸಲ್ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಾವೋವಾದಿಗಳು ಹತ್ಯೆಯಾಗಿದ್ದರು. ಎನ್‌ಕೌಂಟರ್ ಮುಗಿಸಿಕೊಂಡು ಬರುತ್ತಿದ್ದ ಯೋಧರ ವಾಹನಕ್ಕಾಗಿ ಕಾದು ಕುಳಿತ ನಕ್ಸಲರು ಭಾನುವಾರ 2.15 ರ ಸುಮಾರಿಗೆ ಅಂಬೇಲಿ ನಾಲಾ ಬಳಿ ಐಇಡಿ ಬಳಸಿ ಭದ್ರತಾ ಪಡೆಗಳ ವಾಹನವನ್ನು ಸ್ಫೋಟಿಸಿದ್ದಾರೆ.
ವಾಹನದಲ್ಲಿ 8 ಯೋಧರು ಇದ್ದರು. ಐಇಡಿ ಸ್ಫೋಟದಿಂದ ಇಡೀ ವಾಹನ ಛಿದ್ರವಾಗಿದೆ. ಇದರಿಂದ ಅದರಲ್ಲಿ ಎಲ್ಲ ಯೋಧರು ಮತ್ತು ಚಾಲಕ ಸೇರಿ 9 ಮಂದಿ ಹುತಾತ್ಮರಾಗಿದ್ದಾರೆ. ಘಟನೆಯ ಬಳಿಕ ಈ ಪ್ರದೇಶದಲ್ಲಿ ನಕ್ಸಲ್ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ. ಹಂತಕರನ್ನು ಹುಡುಕಿ ಹತ್ಯೆ ಸದೆ ಬಡಿಯಲಾಗುವುದು ಎಂದು ಬಸ್ತಾರ್ ಐಜಿ ಸುಂದರರಾಜ್ ತಿಳಿಸಿದ್ದಾರೆ.
ಇನ್ನು, ಈ ವರ್ಷದ 6 ದಿನಗಳಲ್ಲಿ ನಡೆದ ಮೂರನೇ ನಕ್ಸಲೀಯರ ದಾಳಿ ಇದಾಗಿದೆ. ಜನವರಿ 3 ರಂದು ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 3 ನಕ್ಸಲೀಯರು ಹತರಾಗಿದ್ದರು. ಜನವರಿ 4ರಂದು ದಾಂತೇವಾಡದಲ್ಲಿ 5 ನಕ್ಸಲೀಯರು ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದರು. ಈ ಕಾರ್ಯಾಚರಣೆಯಲ್ಲಿ ದಾಂತೇವಾಡದ ಹೆಡ್ಕಾನ್ಸ್ಟೇಬಲ್ ಒಬ್ಬರು ಹುತಾತ್ಮರಾಗಿದ್ದರು.
ನಕ್ಸಲರ ಮೃತದೇಹ ಪತ್ತೆ:ಅಬುಜ್ಮದ್ ಅರಣ್ಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ಯೋಧರ ಸಂಖ್ಯೆ 5ಕ್ಕೆ ಏರಿದೆ. ಯೋಧರು ಸಮವಸ್ತ್ರದಲ್ಲಿರುವ ನಾಲ್ಕು ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಭಾನುವಾರ ಮತ್ತೊಬ್ಬ ಮಾವೋವಾದಿಯ ಶವ ಪತ್ತೆಯಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಕ್ಸಲರೂ ಇದ್ದಾರೆ. ಸ್ಥಳದಲ್ಲಿ ಎಕೆ - 47, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಹಲವು ಸ್ಫೋಟಕಗಳು ಸಿಕ್ಕಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2026 ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲ್ವಾದವನ್ನು ಸಂಪೂರ್ಣವಾಗಿ ನಿಷ್ಕ್ರಿಯ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಿಸಿದ್ದಾರೆ. ಎಲ್ಲ ಮಾವೋವಾದಿಗಳು ಶಸ್ತಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಛತ್ತೀಸ್‌ಗಢ ಎನ್‌ಕೌಂಟರ್: ನಾಲ್ವರು ನಕ್ಸಲರ ಹತ್ಯೆ, ಡಿಆರ್‌ಜಿ ಹೆಡ್ ಕಾನ್ಸ್‌ಟೇಬಲ್ ಹುತಾತ್ಮ