ಕರ್ನಾಟಕ

karnataka

ETV Bharat / bharat

ಎನ್​​ಡಿಎ ನಾಯಕರಾಗಿ ಮೋದಿ ಸರ್ವಾನುಮತದಿಂದ ಆಯ್ಕೆ: ಜೂನ್​​​​ ​9ರಂದು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ಸ್ವೀಕಾರ - Narendra Modi Oath Taking Ceremony - NARENDRA MODI OATH TAKING CEREMONY

Modi Oath Taking Ceremony: ಜೂನ್ 9ಕ್ಕೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಎನ್​ಡಿಎ ಸಭೆಯಲ್ಲಿ ಸಂಸದ ಪ್ರಲ್ಹಾದ್​ ಜೋಶಿ ಘೋಷಿಸಿದರು.

NARENDRA MODI  PRAHLAD JOSHI  NDA MEETING  NARENDRA MODI WILL TAKE OATH
ನರೇಂದ್ರ ಮೋದಿ (ANI)

By ETV Bharat Karnataka Team

Published : Jun 7, 2024, 12:16 PM IST

Updated : Jun 7, 2024, 1:55 PM IST

ಎನ್​ಡಿಎ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ, ಮಿತ್ರಪಕ್ಷಗಳಿಂದ ಅನುಮೋದನೆ (ANI)

ನವದೆಹಲಿ:ಜೂನ್ 9ಕ್ಕೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ದೆಹಲಿಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ದೆಹಲಿಯ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್​ನ​ಲ್ಲಿ ಎನ್​ಡಿಎ ಸಂಸದರು ನಡೆಸಿದರು. ಈ ಸಭೆಯಲ್ಲಿ ಸಂಸದ ಪ್ರಲ್ಹಾದ್​ ಜೋಶಿ ಅಧಿಕೃತವಾಗಿ ಘೋಷಿಸಿದರು.

ಹಲವು ನಾಯಕರು ಸಭೆಯಲ್ಲಿ ಭಾಗಿ:240 ಬಿಜೆಪಿ ಸಂಸದರೊಂದಿಗೆ, ಟಿಡಿಪಿ, ಜೆಡಿಯು, ಶಿವಸೇನೆ, ಲೋಕಜನಶಕ್ತಿ (ರಾಮವಿಲಾಸ್), ಎನ್‌ಸಿಪಿ, ಜೆಡಿಎಸ್, ಜನಸೇನೆ, ಅಪ್ನಾ ದಳ ಮತ್ತು ಇತರ ಮಿತ್ರಪಕ್ಷಗಳ ಸಂಸದರು, ಎನ್‌ಡಿಎ ಪಕ್ಷಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮೋದಿ ನಾಯಕತ್ವವನ್ನು ಬೆಂಬಲಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕಾರ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಚಾಣಕ್ಯ ಅಮಿತ್ ಶಾ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು, ಬಿಹಾರ್ ಸಿಎಂ ನಿತೀಶ್ ಕುಮಾರ್​ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ನಾವು ಪ್ರಧಾನಿ ಮೋದಿಯವರೊಂದಿಗೆ ಇದ್ದೇವೆ- ಎಚ್‌ಡಿಕೆ:"ಸ್ಥಿರ ಸರ್ಕಾರ ರಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ಗೆ ತಮ್ಮ ಪಕ್ಷದ ಬೆಂಬಲ ನೀಡುತ್ತೇವೆ'' ಎಂದು ಜೆಡಿಎಸ್​ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

''ನಾವೆಲ್ಲರೂ ಮೋದಿಯವರ ಜೊತೆಗಿದ್ದೇವೆ, ನಾವು ಕೇವಲ ಎನ್‌ಡಿಎ ಜೊತೆ ಕೈಜೋಡಿಸುತ್ತಿದ್ದೇವೆ. ನಾನು ಮಾತ್ರವಲ್ಲದೆ ಇಡೀ ದೇಶವೇ ಅವರೊಂದಿಗೆ ಇದೆ. ನಮ್ಮ ಯಾವುದೇ ಬೇಡಿಕೆಯಿಲ್ಲ, ದೇಶಕ್ಕೆ ಸ್ಥಿರ ಸರ್ಕಾರ ಬೇಕು, ಅದಕ್ಕಾಗಿ ನಾವು ಅವರೊಂದಿಗೆ ಕೈಜೋಡಿಸುತ್ತಿದ್ದೇವೆ'' ಎಂದು ತಿಳಿಸಿದರು.

ಎನ್​ಡಿಎ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಶ್ರಮ: ಚಂದ್ರಬಾಬು ನಾಯ್ಡು: ''ಎನ್​ಡಿಎ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಶ್ರಮಿಸಿದ್ದಾರೆ'' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಎನ್ ಡಿಎ ಸಂಸದರ ಸಭೆಯಲ್ಲಿ ಅವರು ಮಾತನಾಡಿದ ಅವರು, ''ಭಾರತಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ನಾಯಕತ್ವ ಬಂದಿದೆ. ಚುನಾವಣಾ ಪ್ರಚಾರದಿಂದ ಕೊನೆಯವರೆಗೂ ಮೋದಿ ಶ್ರಮಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮೂರು ಸಾರ್ವಜನಿಕ ಸಭೆಗಳು ಮತ್ತು ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಶೇ 90ರಷ್ಟು ಸೀಟುಗಳನ್ನು ಗೆದ್ದಿದ್ದೇವೆ. ದೂರದೃಷ್ಟಿಯ ನಾಯಕನ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ'' ಎಂದರು.

''ಭಾರತ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಸರಿಯಾದ ವ್ಯಕ್ತಿ ಸರಿಯಾದ ಸಮಯದಲ್ಲಿ ಪ್ರಧಾನಿಯಾದ ಕಾರಣ ದೇಶ ಪ್ರಗತಿ ಕಂಡಿದೆ. ಮೇಕ್ ಇಂಡಿಯಾ ಮೂಲಕ ಭಾರತವನ್ನು ಬೆಳವಣಿಗೆಯ ಪಥದಲ್ಲಿ ಮುನ್ನಡೆಸಿದರು. ಮೋದಿಯವರ ನೇತೃತ್ವದಲ್ಲಿ ದೇಶವು ಬಡತನ ಮುಕ್ತವಾಗಲಿದೆ. ಅವರ ನಾಯಕತ್ವದಲ್ಲಿ ಭಾರತ 2047ರ ವೇಳೆಗೆ ಮೊದಲ ಸ್ಥಾನದಲ್ಲಿರಲಿದೆ'' ಎಂದು ಚಂದ್ರಬಾಬು ನಾಯ್ಡು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ 10 ವರ್ಷಗಳಲ್ಲಿ ಎನ್​ಡಿಎ ಗುರಿ ಏನು? ಮೋದಿ ಹೇಳಿದ್ದು ಹೀಗೆ:''ಮುಂದಿನ 10 ವರ್ಷಗಳಲ್ಲಿ ಎನ್‌ಡಿಎ ಸರ್ಕಾರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ, ಸಾಮಾನ್ಯ ಜನರ ಜೀವನವನ್ನು ಮತ್ತಷ್ಟು ಸುಧಾರಿಸಲು ಸರ್ಕಾರವು ಒತ್ತು ನೀಡುತ್ತದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎನ್​ಡಿಎ ಸಭೆಯಲ್ಲಿ ಮಾತನಾಡಿದ ಅವರು, ''ನಾವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸಹಭಾಗಿತ್ವದ ಹೊಸ ಅಧ್ಯಾಯವನ್ನು ಬರೆಯುತ್ತೇವೆ. ನಾವೆಲ್ಲರೂ ಸೇರಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡುತ್ತೇವೆ'' ಎಂದ ಅವರು, ''ನಮ್ಮ ದೇಶದಲ್ಲಿ 10 ರಾಜ್ಯಗಳಲ್ಲಿ ನಮ್ಮ ಬುಡಕಟ್ಟು ಸಹೋದರರ ಸಂಖ್ಯೆ ಹೆಚ್ಚಿದೆ. ಈ 10 ರಾಜ್ಯಗಳ ಪೈಕಿ 7 ರಾಜ್ಯಗಳಲ್ಲಿ ಎನ್‌ಡಿಎ ಕಾರ್ಯನಿರ್ವಹಿಸುತ್ತಿದೆ. ಆ ರಾಜ್ಯಗಳಲ್ಲಿಯೂ ಸೇವೆ ಸಲ್ಲಿಸಲು ಎನ್‌ಡಿಎಗೆ ಅವಕಾಶ ಸಿಕ್ಕಿದೆ'' ಎಂದರು.

''ಎಲ್ಲರೂ ನನ್ನನ್ನು ಎನ್‌ಡಿಎ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದು ನನ್ನ ಅದೃಷ್ಟ, ನೀವೆಲ್ಲರೂ ನನಗೆ ಹೊಸ ಜವಾಬ್ದಾರಿ ನೀಡಿದ್ದೀರಿ ಮತ್ತು ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. 2019ರಲ್ಲಿ ನಾನು ಈ ಸಂಸತ್​ನಲ್ಲಿ ಮಾತನಾಡುವಾಗ, ನೀವೆಲ್ಲರೂ ನನ್ನನ್ನು ನಾಯಕನನ್ನಾಗಿ ಆರಿಸಿದಾಗ, ನಾನು ಒಂದು ವಿಷಯಕ್ಕೆ ಒತ್ತು ನೀಡಿದ್ದೇನೆ, ಇಂದು ನೀವು ನನಗೆ ಈ ಪಾತ್ರವನ್ನು ನೀಡುತ್ತಿರುವಾಗ, ನಮ್ಮ ನಡುವಿನ ನಂಬಿಕೆಯ ಸೇತುವೆ ಗಟ್ಟಿಯಾಗಿದೆ ಎಂದು ಅರ್ಥ'' ಎಂದು ತಿಳಿಸಿದರು.

ಜೂನ್​ 4ರಂದು ಪ್ರಕಟವಾದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ​ಎನ್​ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಜೂನ್​ 9ಕ್ಕೆ ಈ ಪ್ರಮಾಣವಚನ ಸಮಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ.

ನೆರೆ ದೇಶಗಳಿಗೆ ಆಹ್ವಾನ:ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಜೂನ್​ 9ರಂದು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ನೇಪಾಳ ಮತ್ತು ಮಾರಿಷಸ್‌ ದೇಶದ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಚುನಾವಣೆ ಫಲಿತಾಂಶದ ಬಳಿಕ ವಿಜಯದ ಬಳಿಕ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ವೇಳೆ, ಮೋದಿ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ ಎಂದು ವಿಕ್ರಮಸಿಂಘೆ ಕಚೇರಿ ಹೇಳಿದೆ.

ಜೊತೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೂ ಮೋದಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾವಹಿಸುವಂತೆ ಆಹ್ವಾನ ನೀಡಿದ್ದಾರೆ. ಇನ್ನು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಹಾಗೂ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ರಾಜತಾಂತ್ರಿಕ ಮೂಲಗಳು ಸ್ಪಷ್ಟಪಡಿಸಿವೆ.

2014, 2019ರಲ್ಲಿ ಪ್ರಮಾಣ ವಚನ ಸಮಾರಂಭ ಮಾಹಿತಿ:2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ತಮ್ಮ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ದೇಶಗಳ ನಾಯಕರು ಪಾಲ್ಗೊಂಡಿದ್ದರು. 2019ರಲ್ಲಿ ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಿ ಸ್ವೀಕಾರ ಮಾಡಿದಾಗ ಬಂಗಾಳ ಕೊಲ್ಲಿಯನ್ನು ಅವಲಂಬಿಸಿದ 'BIMSTEC' (ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ಲೆಂಡ್​ ) ರಾಷ್ಟ್ರಗಳ ನಾಯಕರು ಭಾಗವಹಿಸಿದ್ದರು.

ಇದನ್ನೂ ಓದಿ:ವಿಧಾನ ಪರಿಷತ್‌ ಚುನಾವಣೆ: ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್​, ಮೂರು ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್​ ಮೈತ್ರಿಗೆ ಗೆಲುವು - MLC Election Results

Last Updated : Jun 7, 2024, 1:55 PM IST

ABOUT THE AUTHOR

...view details