ನವದೆಹಲಿ: ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಭಾರತದ ಗಡಿಯು ಮಿಜೋರಾಂ ಪ್ರವೇಶಿಸಿದ್ದಾರೆ. ತಮ್ಮ ದೇಶದಲ್ಲಿರುವ ಬಂಡುಕೋರ ಪಡೆಗಳೊಂದಿಗಿನ ಭಾರಿ ಗುಂಡಿನ ಚಕಮಕಿಯಿಂದ ತಪ್ಪಿಸಿಕೊಂಡು ಮಿಜೋರಾಂಗೆ ಒಳಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿದೆ.
ಮ್ಯಾನ್ಮಾರ್‌ನಲ್ಲಿನ ಬಂಡುಕೋರ ಪಡೆಗಳು ಮತ್ತು ಜುಂಟಾ ಆಡಳಿತದ ನಡುವೆ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಎರಡು ಪಡೆಗಳ ನಡುವೆ ಗುಂಡಿನ ಚಕಮಕಿ ಬಳಿಕ ಸುಮಾರು 280 - 300 ಮ್ಯಾನ್ಮಾರ್ ಸೇನಾ ಸಿಬ್ಬಂದಿ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದೆರಡು ದಿನಗಳಲ್ಲಿ ಮ್ಯಾನ್ಮಾರ್ ಭದ್ರತಾ ಸಿಬ್ಬಂದಿ ಮಿಜೋರಾಂ ಪ್ರವೇಶಿಸಿದ್ದಾರೆ. ಶೀಘ್ರವೇ ಎಲ್ಲರನ್ನೂ ವಾಪಸ್ ಕಳುಹಿಸಲಾಗುತ್ತದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು 'ಈಟಿವಿ ಭಾರತ್'ಗೆ ಖಚಿತ ಪಡಿಸಿದ್ದಾರೆ.
ಮತ್ತೊಂದೆಡೆ, ಶಿಲ್ಲಾಂಗ್‌ನಲ್ಲಿ ನಡೆದ ಈಶಾನ್ಯ ಕೌನ್ಸಿಲ್ (ಎನ್‌ಇಸಿ) ಮುಕ್ತಾಯಗೊಂಡಿದೆ. ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಅಮಿತ್ ಶಾ ಅವರಿಗೆ ಮಿಜೋರಾಂ ಮುಖ್ಯಮಂತ್ರಿ ಲಾಲ್ದು ಹೋಮ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಲಾಲ್ದು ಹೋಮ, ನೆರೆಯ ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದಂತೆ ಕಾಲಕಾಲಕ್ಕೆ ಮ್ಯಾನ್ಮಾರ್ ಸೈನ್ಯ ಸೇರಿದಂತೆ ಮ್ಯಾನ್ಮಾರ್‌ನ ಜನರು ಮಿಜೋರಾಂಗೆ ಬರುತ್ತಾರೆ. ಮಾನವೀಯ ಆಧಾರದ ಮೇಲೆ ನಾವು ಅವರಿಗೆ ಉಳಿಯಲು ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಅಮಿತ್ ಶಾ ಅವರೊಂದಿಗೆ ಚರ್ಚೆ ವೇಳೆ ಸಿಎಂ ಲಾಲ್ದು ಹೋಮ ಮ್ಯಾನ್ಮಾರ್ ಸೇನೆಯನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮ್ಯಾನ್ಮಾರ್ ಸೇನೆಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಲಾಲ್ದುಹೋಮ ಚರ್ಚಿಸಿದ್ದಾರೆ. ಆಗ ಮಿಜೋರಾಂ ಸರ್ಕಾರಕ್ಕೆ ಅಗತ್ಯ ಇರುವ ಎಲ್ಲ ಸಹಕಾರ ನೀಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಸಿಎಂ ಪ್ರಧಾನ ಕಾರ್ಯದರ್ಶಿ ಅಂಗು ಮಾಹಿತಿ ನೀಡಿದ್ದಾರೆ.