ತಿರುವನಂತಪುರ (ಕೇರಳ) :ಅಯೋಧ್ಯೆ ಭೂಮಿಯು ರಾಮನ ಜನ್ಮ ಸ್ಥಳ ಎಂದು ಉತ್ಖನನದಲ್ಲಿ ಸಾರಿ ಹೇಳಿದ್ದ ನಿವೃತ್ತ ಪುರಾತತ್ವಶಾಸ್ತ್ರಜ್ಞ ಕೆಕೆ ಮೊಹಮ್ಮದ್ ಅವರು, ಮಥುರಾದಲ್ಲಿನ ಶಾಹಿ ಈದ್ಗಾ, ವಾರಾಣಸಿಯ ಜ್ಞಾನವಾಪಿ ಸ್ಥಳವನ್ನು ಮುಸ್ಲಿಮರು ಹಿಂದುಗಳಿಗೆ ಬಿಟ್ಟುಕೊಡಬೇಕು. ಇದೊಂದೇ ಎಲ್ಲ ಸಮಸ್ಯೆಗಳಿಗೆ ಇರುವ ಪರಿಹಾರ ಎಂದು ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಅಯೋಧ್ಯೆ ರಾಮಜನ್ಮಭೂಮಿ ಎಂಬುದರಲ್ಲಿ ಸಂಶಯವೇ ಇಲ್ಲ. ಉತ್ಖನನದ ವೇಳೆ ಇದಕ್ಕೆ ಪೂರಕ ಸಾಕ್ಷಿಗಳು ದೊರಕಿವೆ. ಅದರಂತೆ ಶಾಹಿ ಈದ್ಗಾ ಮತ್ತು ಜ್ಞಾನವಾಪಿ ಮಸೀದಿಯ ಸ್ಥಳ ಹಿಂದುಗಳಿಗೆ ಸೇರಬೇಕು. ಅದು ಅವರ ದೈವಿಕ ನಂಬಿಕೆಯ ಜಾಗ ಎಂದಿದ್ದಾರೆ.
ಈ ಎರಡೂ ಸ್ಥಳಗಳನ್ನು ಹಿಂದೂಗಳಿಗೆ ವಾಪಸ್ ನೀಡುವುದೇ ಈಗಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಧಾರ್ಮಿಕ ನಾಯಕರು ಒಗ್ಗಟ್ಟಾಗಿ ಮಸೀದಿಗಳು ಇರುವ ಜಾಗವನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕು. ಕಾಶಿ, ಮಥುರಾ ಮತ್ತು ಅಯೋಧ್ಯೆ ಹಿಂದೂಗಳಿಗೆ ಬಹಳ ಮುಖ್ಯವಾಗಿವೆ. ಏಕೆಂದರೆ ಅವು ಶಿವ, ಕೃಷ್ಣ ಮತ್ತು ಶ್ರೀರಾಮನ ಪವಿತ್ರ ಸ್ಥಳಗಳಾಗಿವೆ. ಇಲ್ಲಿರುವ ಮಸೀದಿಗಳು ಮುಸ್ಲಿಮರಿಗೆ ಯಾವುದೇ ಪೂಜ್ಯನೀಯ ಸ್ಥಳಗಳಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಸಂತಸ:ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿದ್ದು, ಓರ್ವ ವೃತ್ತಿಪರ ಪುರಾತತ್ವಶಾಸ್ತ್ರಜ್ಞನಾಗಿ ಖುಷಿ ಪಡುತ್ತೇನೆ. ಅಯೋಧ್ಯೆಯಲ್ಲಿ ಭಗವಾನ್ ರಾಮನ ದಿವ್ಯ ದೇಗುಲ ಕಟ್ಟಿರುವುದು ನನಗೆ ಸಂತೋಷ ತಂದಿದೆ. ನಾನು ಹಿಂದೂ ಅಥವಾ ಮುಸ್ಲಿಂ ಅಲ್ಲ. ವೃತ್ತಿಪರ ಪುರಾತತ್ವಶಾಸ್ತ್ರಜ್ಞ. ಹಲವಾರು ವರ್ಷಗಳ ಉತ್ಖನನ ಮತ್ತು ವೈಜ್ಞಾನಿಕ ಸಂಶೋಧನೆಗಳು ಸರಿಯಾದ ಫಲಿತಾಂಶ ನೀಡಿವೆ ಎಂಬುದಕ್ಕೆ ಮಂದಿರವೇ ಸಾಕ್ಷಿ ಎಂದಿದ್ದಾರೆ.