ಬಸ್ತಿ (ಉತ್ತರ ಪ್ರದೇಶ) :ಮುಸ್ಲಿಮ್ ಯುವಕ ತನ್ನ ಹಿಂದು ಪ್ರೇಯಸಿಗಾಗಿ ತಾನೇ ಸನಾತನ ಧರ್ಮಕ್ಕೆ ಮತಾಂತರವಾದ ಅಪರೂಪದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
34 ವರ್ಷದ ಮುಸ್ಲಿಮ್ ಯುವಕ ಸದ್ದಾಂ ಮತ್ತು 30 ವರ್ಷದ ಹಿಂದು ಯುವತಿ ಕಳೆದ 10 ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದರು. ಮೊದಲು ವಿವಾಹಕ್ಕೆ ನಿರಾಕರಿಸಿದ್ದ ಸದ್ದಾಂ ಇದೀಗ, ಒಪ್ಪಿಕೊಂಡು ತನ್ನಾಕೆಗಾಗಿ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ತನ್ನ ಹೆಸರಿನ್ನು ಶಿವಶಂಕರ್ ಸೋನಿ ಎಂದು ಬದಲಿಸಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಇಲ್ಲಿನ ನಗರ ಬಜಾರ್ ನಿವಾಸಿಯಾಗಿದ್ದ ಸದ್ದಾಂ (ಶಿವಶಂಕರ್) ಅದೇ ಪ್ರದೇಶದ ಹಿಂದು ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಹಲವು ಬಾರಿ ವಿವಾಹಕ್ಕೆ ಒತ್ತಾಯಿಸಿದ್ದಾಳೆ. ಆದರೆ, ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ ಕಾರಣ, ಯುವಕನ ಕುಟುಂಬಸ್ಥರು ನಿರಾಕರಿಸಿದ್ದರು.
ಸ್ವಇಚ್ಛೆಯಿಂದ ಮತಾಂತರ, ವಿವಾಹ :ಇದರಿಂದ ಯುವತಿ ಕುಟುಂಬಸ್ಥರು ಮೂರು ದಿನಗಳ ಹಿಂದಷ್ಟೇ, ಸದ್ದಾಂ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಮದುವೆಯ ನೆಪದಲ್ಲಿ ಅತ್ಯಾಚಾರ, ಗರ್ಭಪಾತ ಮಾಡಿಸಲು ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ, ಅವರಿಬ್ಬರೂ ಸ್ವಇಚ್ಛೆಯಿಂದ ವಿವಾಹವಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ.