ಸಂಭಾಲ್: ಮಸೀದಿಯಿಂದ ಸುಮಾರು 200 ಮೀಟರ್ ದೂರದಲ್ಲಿ ಮತ್ತೊಂದು ಪುರಾತನ ಬಾವಿಯನ್ನು ಉತ್ತರ ಪ್ರದೇಶದ ಸಂಭಾಲ್ ಅಧಿಕಾರಿಗಳು ಗುರುವಾರ ಪತ್ತೆ ಹಚ್ಚಿದ್ದಾರೆ. ಇದು ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಹತ್ತಿರದ ಚಂದೌಸಿ ಪ್ರದೇಶದಲ್ಲಿ ಉತ್ಖನನದ ಸಮಯದಲ್ಲಿ ಮೆಟ್ಟಿಲು ಬಾವಿ ಮತ್ತು ಸುರಂಗ ಪತ್ತೆಯಾದ ಕೆಲವೇ ದಿನಗಳ ನಂತರ ಈಗ ಮತ್ತೊಂದು ಬಾವಿ ಪತ್ತೆಯಾಗಿದೆ. ಇದು ಪ್ರದೇಶದ ಪರಂಪರೆಯ ಬಗ್ಗೆ ಹೊಸ ಆಸಕ್ತಿಯನ್ನು ಹುಟ್ಟುಹಾಕಿದೆ.
ಸಂಭಾಲ್ ಸದರ್ನ ಸಾರಥಾಲ್ ಹೊರಠಾಣೆಯ ಬಳಿ ಹೊಸದಾಗಿ ಪತ್ತೆಯಾದ ಬಾವಿಯು ಹಿಂದೂ ನಿವಾಸಿಗಳು ಇರುವ ಪ್ರದೇಶದಲ್ಲಿದೆ. ಹೆಚ್ಚಿನ ಉತ್ಖನನಕ್ಕೆ ಅನುಕೂಲವಾಗುವಂತೆ ಪುರಸಭೆಯ ತಂಡವು ಸ್ಥಳದಿಂದ ಮಣ್ಣನ್ನು ತೆರವುಗೊಳಿಸುತ್ತಿದೆ. ಸ್ಥಳೀಯರು ಈ ಬಾವಿಯನ್ನು "ಮೃತ್ಯು ಕೂಪ್" ಎಂದು ಗುರುತಿಸಿದ್ದಾರೆ. ಇದು ಪ್ರಾಚೀನ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ ಮತ್ತು ಬ್ರಹ್ಮ ದೇವರು ರಚಿಸಿದ 19 ಬಾವಿಗಳಲ್ಲಿ ಇದೂ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
20 ವರ್ಷಗಳ ಹಿಂದೆ ಈ ಬಾವಿಯಲ್ಲಿತ್ತು ನೀರು:ಸುಮಾರು 20 ವರ್ಷಗಳ ಹಿಂದೆ ಈ ಬಾವಿಯಲ್ಲಿ ನೀರು ಇರುತ್ತಿತ್ತು. ಜನ ಪ್ರಾರ್ಥನೆಗಾಗಿ ಹತ್ತಿರದ ಮೃತ್ಯುಂಜಯ ಮಹಾದೇವ್ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಇಲ್ಲಿ ಸ್ನಾನ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ಶ್ಲಾಘಿಸಿದ ಮತ್ತೊಬ್ಬ ನಿವಾಸಿ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಪ್ರಯತ್ನಗಳು ಈ ಸ್ಥಳದ ಪುನರುಜ್ಜೀವನಕ್ಕೆ ಕಾರಣ ಎಂದು ಹೇಳಿದರು.