ಚಾಮರಾಜನಗರ: ಸಂಕ್ರಾಂತಿ ಹಬ್ಬದ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಹುಲುಗನ ಮುರುಡಿ ವೆಂಕಟರಮಣ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪ ಇರುವ ಹುಲುಗನ ಮುರುಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನ 12.50ರ ಸುಮಾರಿಗೆ ಗರುಡ ಪಕ್ಷಿಯು ರಥ ಹಾಗೂ ಗೋಪುರದ ಮೇಲೆ ಹಾರಾಟ ನಡೆಸುತ್ತಿದ್ದಂತೆ ತಹಶೀಲ್ದಾರ್ ಟಿ.ರಮೇಶ್ ಬಾಬು ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಸುತ್ತ ರಥ ಎಳೆದ ಭಕ್ತರು: ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನಂಜನಗೂಡು, ಚಾಮರಾಜನಗರ, ಯಳಂದೂರು ತಾಲೂಕುಗಳಿಂದ ಸಾವಿರಾರು ಮಂದಿ ಭಕ್ತರು ರಥೋತ್ಸದಲ್ಲಿ ಭಾಗವಹಿಸಿ ವೆಂಕಟರಮಣ, ಗೋವಿಂದ, ಗೋವಿಂದ ಎಂದು ಜಯ ಘೋಷ ಕೂಗುತ್ತ ರಥವನ್ನು ಒಂದು ಸುತ್ತು ಎಳೆದರು. ನೂರಾರು ನವ ಜೋಡಿಗಳು ಹಾಗೂ ಭಕ್ತರು ತೇರಿಗೆ ಹಣ್ಣು-ಧವನ ಎಸೆದು ಭಕ್ತಿ ಸಮರ್ಪಿಸಿದರು. ಬೆಟ್ಟದ ತಪ್ಪಲು ಸೇರಿದಂತೆ ಬೆಟ್ಟದ ಮೇಲೆ ಹರಕೆ ಹೊತ್ತ ಭಕ್ತರು, ಉಪಹಾರ ಹಾಗೂ ಪಾನಕ, ಮಜ್ಜಿಗೆಯನ್ನು ಬಂದ ಭಕ್ತ ಸಮೂಹಕ್ಕೆ ವಿತರಿಸಿದರು.
ಸಾರಿಗೆ ಬಸ್‍ನಲ್ಲಿ ಜನರು ಬೆಟ್ಟಕ್ಕೆ ಬಂದರೆ ಇನ್ನು ಕೆಲ ಹರಕೆ ಹೊತ್ತ ಸಾವಿರಾರು ಮಂದಿ ಭಕ್ತರು ನೆರೆಯ ಗ್ರಾಮ ಹಾಗೂ ತಪ್ಪಲಿನಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಬೆಟ್ಟ ಏರಿ ಬಂದರು. ಖಾಸಗಿ ವಾಹನಗಳಿಗೆ ಬೆಟ್ಟದ ಮೇಲೆ ನಿರ್ಬಂಧ ಹೇರಲಾಗಿತ್ತು. ಜೊತೆಗೆ ಕಾರು ಮತ್ತು ಬೈಕ್‍ಗಳಿಗೆ ತಪ್ಪಲಿನಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಬೆಟ್ಟಕ್ಕೆ ಸಹಸ್ರಾರು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಅರಿತು ತಾಲೂಕು ಆಡಳಿತ ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಹಾಗು ತುರ್ತು ಸೇವೆಗೆ ಆಂಬ್ಯುಲೆನ್ಸ್ ಸಹ ತರಿಸಲಾಗಿತ್ತು.
ಅಧಿಕ ಮಂದಿ ಮಹಿಳೆಯರು ಭಾಗಿ: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ ಇರುವ ಕಾರಣ ಸುತ್ತಮುತ್ತಲ ಗ್ರಾಮ, ತಾಲೂಕು ಸೇರಿದಂತೆ ಜಿಲ್ಲೆ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಕೆ ಮಾಡಿದರು.
ಇದನ್ನೂ ಓದಿ: ಕೊಳ್ಳೇಗಾಲ: ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ವಿಧ್ಯುಕ್ತ ಚಾಲನೆ; ಉತ್ತರ ದಿಕ್ಕಿಗೆ ವಾಲಿದ ಚಂದ್ರಮಂಡಲ