ಅಂಬೇಡ್ಕರ್‌ನಗರ(ಉತ್ತರಪ್ರದೇಶ):ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ವರಿಷ್ಠೆ ಮಾಯಾವತಿ ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈ ಬಾರಿ ಅವರು ಪಕ್ಷ ವಿರೋಧಿ ಚಟುವಟಿಕೆಗಾಗಿ ಸಂಸದ ರಾಮ್ ಶಿರೋಮಣಿ ವರ್ಮಾ ಮತ್ತು ಸಹೋದರ ರಾಮಸುರೇಶ್ ವರ್ಮಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.
ಈ ಸಂಬಂಧ ಬಿಎಸ್‌ಪಿ ಜಿಲ್ಲಾಧ್ಯಕ್ಷ ಸುನೀಲ್ ಸಾವಂತ್ ಅವರು ಉಚ್ಚಾಟನೆ ಕುರಿತು ಪತ್ರ ಬರೆದಿದ್ದಾರೆ. ಇದೇ ವೇಳೆ ಎಸ್ಪಿ ಜೊತೆ ಸಂಸದ ರಾಮ್ ಶಿರೋಮಣಿ ವರ್ಮಾ ಅವರ ಆಪ್ತತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಪಕ್ಷದ ಹೈಕಮಾಂಡ್ ಈ ಕ್ರಮಕ್ಕೆ ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದೇ ವೇಳೆ ಹೈಕಮಾಂಡ್ ಮುಂದೆ ಈ ಬಗ್ಗೆ ತಮ್ಮ ನಿಲುವನ್ನು ಮಂಡಿಸಲು ಪ್ರಯತ್ನಿಸುವುದಾಗಿ ಸಂಸದರು ಹೇಳುತ್ತಾರೆ. ಇದರ ನಂತರ ಮುಂದಿನ ಕಾರ್ಯತಂತ್ರವನ್ನು ಅವರು ನಿರ್ಧರಿಸಲಿದ್ದಾರೆ.
ಅಂಬೇಡ್ಕರ್ ನಗರದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಸುನೀಲ್ ಸಾವಂತ್ ಅವರು ಸಂಸದ ರಾಮ್ ಶಿರೋಮಣಿ ವರ್ಮಾ ಮತ್ತು ಸಹೋದರನನ್ನು ಪಕ್ಷದಿಂದ ಉಚ್ಚಾಟಿಸಿ ಪತ್ರವೊಂದನ್ನು ಹೊರಡಿಸಿದ್ದಾರೆ. ಈ ಪತ್ರದಲ್ಲಿ ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಉಚ್ಚಾಟನೆ ಮಾಡಿದ್ದಾರೆ.