ನಾಂದೇಡ್ (ಮಹಾರಾಷ್ಟ್ರ): ನಾಂದೇಡ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಕ್ತರು ವಿಷಪೂರಿತ ಮಹಾಪ್ರಸಾದ ಸೇವಿಸಿದ ಆಘಾತಕಾರಿ ಘಟನೆ ನಡೆದಿದೆ. ಲೋಹಾ ತಾಲೂಕಿನ ಕೋಷ್ಟವಾಡಿ ಗ್ರಾಮದಲ್ಲಿ ಸಂತ ಬಾಳುಮಾಮರ ಧಾರ್ಮಿಕ ಕಾರ್ಯಕ್ರಮವಾದ ಪಲ್ಲಕಿ ಉತ್ಸವದಲ್ಲಿ ಮಂಗಳವಾರ ಈ ದುರಂತ ಸಂಭವಿಸಿದೆ. ಅಸ್ವಸ್ಥಗೊಂಡ ಎಲ್ಲ ಭಕ್ತರನ್ನು ರಾತ್ರಿಯೇ ನಾಂದೇಡ್‌ನ ಲೋಹಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸ್ಥಳೀಯ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಯಾ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ವಿಷ: ಪ್ರತಿವರ್ಷದಂತೆ ಈ ವರ್ಷವೂ ಕೋಷ್ಟವಾಡಿ ಗ್ರಾಮದಲ್ಲಿ ಪವಾಡ ಪುರುಷ ಬಾಳುಮಾಮ ಅವರ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಬಂದ ಭಕ್ತರಿಗೆ ಭಗರ್ ಎಂಬ ಮಹಾಪ್ರಸಾದ ಏರ್ಪಡಿಸಲಾಗಿತ್ತು. ಆದರೆ, ಈ ಮಹಾಪ್ರಸಾದ ಸೇವಿಸಿದ ಸಾವಿರಕ್ಕೂ ಹೆಚ್ಚು ಭಕ್ತರಲ್ಲಿ ವಾಂತಿ - ಭೇದಿ ಕಾಣಿಸಿಕೊಂಡಿತ್ತು.
ರೋಗಿಗಳ ಸ್ಥಿತಿ ಸ್ಥಿರ: ಅಸ್ವಸ್ಥಗೊಂಡವರನ್ನು ತಕ್ಷಣ ಲೋಹಾ ಸರ್ಕಾರಿ ಆಸ್ಪತ್ರೆ, ಗ್ರಾಮಾಂತರ ಆಸ್ಪತ್ರೆ, ಲಾತೂರ್ನ ಅಹಮದ್‌ಪುರದ ಆಸ್ಪತ್ರೆ, ಗುರು ಗೋಬಿಂದ್ ಸಿಂಗ್ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಪೂರಿತ ಮಹಾಪ್ರಸಾದ ಸೇವನೆಯಿಂದ ಭಕ್ತರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ನೀಲಕಂಠ ಭೋಸಿಕರ್ ತಿಳಿಸಿದ್ದಾರೆ.