ನವದೆಹಲಿ: ನೈಋತ್ಯ ಮುಂಗಾರು ಗುರುವಾರವೇ ಕೇರಳದ ಕರಾವಳಿಗೆ ಅಪ್ಪಳಿಸಿದೆ. ಈಶಾನ್ಯ ಭಾರತದ ಭಾಗಗಳಿಗೂ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಈ ಮುಂಗಾರು ಮಳೆಯು ಭೂಮಿಗೆ ಜೀವಕಳೆ ನೀಡಲಿದ್ದು, ಅನ್ನದಾತರಲ್ಲಿ ಸಂಭ್ರಮಕ್ಕೂ ಕಾರಣವಾಗಿದೆ. ಕೃಷಿ ಚಟುವಟಿಕೆಗಳಿಗೂ ವೇಗ ಸಿಗಲಿದೆ.
ಈ ವರ್ಷದ ಮುಂಗಾರು ಎರಡು ದಿನ ಮುಂಚಿತವಾಗಿಯೇ ದೇಶಕ್ಕೆ ಕಾಲಿಟ್ಟಿದೆ. ವಾಡಿಕೆ ಪ್ರಕಾರ, ಈ ಬಾರಿ ಜೂನ್ 1ರಂದು ಮಾನ್ಸೂನ್ ಪ್ರವೇಶವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಕೇರಳವು ಮುಂಗಾರು ಆಗಮನಕ್ಕೂ ಪೂರ್ವದಲ್ಲೇ ವ್ಯಾಪಕವಾದ ಮಳೆ ಕಂಡಿತ್ತು. ಇಂದು ಅಧಿಕೃತವಾಗಿ ಮುಂಗಾರು ಪ್ರವೇಶಿಸಿದೆ. ಜೂನ್ 6ಕ್ಕೆ ಕರ್ನಾಟಕಕ್ಕೆ ಮುಂಗಾರು ಆಗಮನದ ನಿರೀಕ್ಷೆ ಇದೆ.2023ರ ಮುಂಗಾರು ಋತುವಿನಲ್ಲಿ (ಜೂನ್-ಸೆಪ್ಟೆಂಬರ್) ದೇಶದಾದ್ಯಂತ ಶೇ.94ರಷ್ಟು ಮಳೆಯಾಗಿತ್ತು.
ಈ ಮುಂಗಾರು ಮಳೆ ಭಾರತದ ನೆಲಕ್ಕೆ ಪ್ರಮುಖವಾಗಿದೆ. ಕೇರಳದಿಂದ ಅದು ಆರಂಭವಾಗಿ ದೇಶಾದ್ಯಂತ ಪರಿಸರಿಸಲಿದೆ. ಬಿಸಿ ಮತ್ತು ಶುಷ್ಕ ಋತುವಿನಿಂದ ಮಳೆಗಾಲಕ್ಕೆ ಪರಿವರ್ತನೆಯ ಪ್ರಮುಖ ಸೂಚಕವೂ ಆಗಿದೆ. ಮಾನ್ಸೂನ್ ಉತ್ತರಾಭಿಮುಖವಾಗಿ ಮುಂದುವರೆದಂತೆ ಅದು ಆವರಿಸುವ ಪ್ರದೇಶಗಳ ಮೇಲೆ ಸುಡುವ ಬೇಸಿಗೆಯ ತಾಪಮಾನಕ್ಕೆ ತಂಪಿನ ಕಂಪು ಸೂಸುತ್ತದೆ.
ಕೃಷಿ ಚಟುವಟಿಕೆಗಳಿಗೆ ವೇಗ: ಮುಂಗಾರು ಮಳೆ ಭಾರತೀಯ ಕೃಷಿ ಆರ್ಥಿಕತೆಗೆ ನಿರ್ಣಾಯಕವಾಗಿವೆ. ಭಾರತವು ಬೇಸಿಗೆ, ಮುಂಗಾರು (ಖಾರಿಫ್) ಮತ್ತು ಹಿಂಗಾರು (ರಬಿ) ಎಂಬ ಮೂರು ಬೆಳೆ ಋತುಗಳನ್ನು ಹೊಂದಿದೆ. ರಬಿ ಬೆಳೆಗಳನ್ನು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಿತ್ತನೆ ಮಾಡಿ, ಜನವರಿಯಿಂದ ಕೊಯ್ಲು ಮಾಡಲಾಗುತ್ತದೆ. ಖಾರಿಫ್ ಬೆಳೆಗಳು ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದ್ದು, ಇವುಗಳನ್ನು ಜೂನ್ - ಜುಲೈನಲ್ಲಿ ಬಿತ್ತನೆ ಮಾಡಿ, ಅಕ್ಟೋಬರ್-ನವೆಂಬರ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ. ಬೇಸಿಗೆ ಬೆಳೆಗಳು ಎಂದರೆ, ರಬಿ ಮತ್ತು ಖಾರಿಫ್ ನಡುವೆ ಬೆಳೆಯುವ ಬೆಳೆಗಳಾಗಿವೆ.