ಕೋಲ್ಕತ್ತಾ:ಬಂಗಾಳದಲ್ಲಿ ನಡೆದ ವೈದ್ಯೆ ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ, ಕೊಲೆ ಕೇಸ್ ವಿರುದ್ಧ ದೇಶಾದ್ಯಂತ ವೈದ್ಯ ಸಮುದಾಯ ಸೇರಿದಂತೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಮಧ್ಯೆ ಕೋಲ್ಕತ್ತಾದಲ್ಲಿ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಫುಟ್‌ಬಾಲ್‌ನಲ್ಲಿ ಬಹುಕಾಲದ ಪ್ರತಿಸ್ಪರ್ಧಿಗಳಾದ ಎರಡು ಗುಂಪುಗಳು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿವೆ.
ಫುಟ್‌ಬಾಲ್‌ನಲ್ಲಿ ಶತ್ರುಗಳೆಂದು ಕರೆಯಲ್ಪಡುವ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್ ಕ್ಲಬ್‌ಗಳು ಭಾನುವಾರ ನಡೆದ ಹೋರಾಟದಲ್ಲಿ ಕೈಜೋಡಿಸಿವೆ. ಈ ತಂಡಗಳು ದೇಶದ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್‌ಗಳಾಗಿವೆ. ಈ ಗುಂಪುಗಳ ನೂರಾರು ಬೆಂಬಲಿಗರು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂಗೆ ಆಗಮಿಸಿ, ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.
ಸರ್ಕಾರದ ವಿರುದ್ಧ ಭಿತ್ತಿಪತ್ರ ಹಾಗೂ ಘೋಷಣೆ ಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಆಂದೋಲನದಲ್ಲಿ ಮತ್ತೊಂದು ಫುಟ್ಬಾಲ್ ಕ್ಲಬ್‌ನ ಬೆಂಬಲಿಗರೂ ಸೇರಿಕೊಂಡಿದ್ದರು. ಮೂರು ಕ್ಲಬ್‌ಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಎಚ್ಚೆತ್ತ ಪೊಲೀಸರು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಕ್ಲಬ್‌ಗಳ ಅಭಿಮಾನಿಗಳು ಒಂದೆಡೆ ಸೇರಿದಲ್ಲಿ ಏನಾದರೂ ಅವಘಡಗಳು ಸಂಭವಿಸಲಿವೆ ಎಂದು ಆತಂಕಗೊಂಡಿದ್ದ ಪೊಲೀಸರು ಅವರನ್ನು ತಡೆಯಲು ಮುಂದಾದರೂ, ಅಭಿಮಾನಿಗಳು ಮಾತ್ರ ಎದೆಗುಂದಲಿಲ್ಲ. ವಿಶೇಷವೆಂದರೆ, ಹೋರಾಟದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಭಾಗವಹಿಸಿದ್ದರು.