ನವದೆಹಲಿ:ದೆಹಲಿಯಿಂದ ಎಎಪಿ ಸರ್ಕಾರ ಹೊರ ಹೋಗುವ ಸಮಯ ಬಂದಿದ್ದು, ರಾಷ್ಟ್ರ ರಾಜಧಾನಿಯ ಜನರ ಸೇವೆ ಮಾಡಲು ಒಂದು ಅವಕಾಶವನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೆಹಲಿ ಕರ್ತರ್ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿ ಜನರಿಗೆ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಬೇಕಿದ್ದು, ಫೆ 5ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಕೋರಿದರು. ಯಮುನಾ ನದಿಗೆ ಹರಿಯಾಣ ವಿಷ ಹಾಕುತ್ತಿದೆ ಎಂಬ ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರುದ್ಧ ಹರಿಹಾಯ್ದ ಪ್ರಧಾನಿ, ದೆಹಲಿ ಮಾಜಿ ಸಿಎಂ ಹರಿಯಾಣ ಜನರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಅಪ್ಡಾ(AAPda) (ವಿಪತ್ತು) ತನ್ನ ವಿವೇಚನೆ ಕಳೆದುಕೊಂಡಿದೆ. ದೆಹಲಿ ಜನರಿಗಿಂತ ಇವರು ವಿಭಿನ್ನರೇ, ಹರಿಯಾಣ ನಿವಾಸಿಗಳ ಸಂಬಂಧಿಕರು ದೆಹಲಿಯಲ್ಲಿ ವಾಸಿಸುವುದಿಲ್ಲವೇ. ಅವರು ಈ ನೀರನ್ನು ಕುಡಿಯುವುದಿಲ್ಲವೇ, ಹರಿಯಾಣದ ಜನರು ತಮ್ಮ ಸಂಬಂಧಿಕರು ಕುಡಿಯುವ ನೀರಿಗೆ ವಿಷ ಹಾಕುತ್ತಾರೆಯೇ ಎಂದು ಪ್ರಶ್ನಿಸಿದ ಮೋದಿ, ಇದೇ ನೀರನ್ನೇ ಅವರು ಕುಡಿಯುವುದಲ್ಲವೇ ಎಂದು ಕೇಜ್ರಿವಾಲ್ ಅವರನ್ನ ಕೇಳಿದ್ದಾರೆ.
ಕಳೆದ 25 ವರ್ಷಗಳಲ್ಲಿ ಎರಡೂ ಪಕ್ಷಗಳ ಆಡಳಿತ ನೋಡಿದ್ದೀರಿ.. ಈಗ ನಮಗೆ ಅವಕಾಶ ಕೊಡಿ:ಕಾಂಗ್ರೆಸ್ ಮತ್ತು ಎಎಪಿ ಎರಡೂ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, 21ನೇ ಶತನಮಾದ ಮೊದಲ 14 ವರ್ಷ ಕಾಂಗ್ರೆಸ್ ಆಡಳಿತವನ್ನು ನೋಡಿದ್ದೀರಿ,. ಇದಾದ ಬಳಿಕ 11 ವರ್ಷ ಅಪ್ಡಾ (AAPda) (ವಿಪತ್ತು) ಸರ್ಕಾರವನ್ನು ನೋಡಿದ್ದೀರಿ. ಆದರೂ ದೆಹಲಿಯ ಸಮಸ್ಯೆ ಹಾಗೇ ಉಳಿದಿದೆ. ಕಳೆದ 25 ವರ್ಷದಲ್ಲಿ ಈ ಎರಡು ರಾಜಕೀಯ ಪಕ್ಷಗಳು ಎರಡು ಪೀಳಿಗೆಯ ಜನರನ್ನು ಹಾಳು ಮಾಡಿವೆ ಎಂದು ಹರಿಹಾಯ್ದರು.
ಈ ಬಾರಿ ಬಿಜೆಪಿಗೆ ಅವಕಾಶ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಕಳೆದ 25 ವರ್ಷದಿಂದ ನಮಗೆ ನೀವು ಅವಕಾಶ ನೀಡಿಲ್ಲ. ಕಾಂಗ್ರೆಸ್ ಮತ್ತು ಅಪ್ಡಾವನ್ನು ನೋಡಿದ್ದೀರಿ. ಇದೀಗ ಕಮಲದ ಅವಕಾಶವಾಗಿದೆ. ನಿಮ್ಮ ಮನೆಯ ಮುಖ್ಯಸ್ಥರು ಪ್ರೀತಿ ಪಾತ್ರರನ್ನು ನೋಡಿಕೊಳ್ಳುವಂತೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಮ್ಮ ಭರವಸೆಗಳನ್ನು ನಾವು ಪೂರೈಸಿದ್ದೇವೆ ಎಂಬುದನ್ನು ಬಿಜೆಪಿ ಟ್ರಾಕ್ ರೆಕಾರ್ಡ್ ತೋರಿಸುತ್ತದೆ ಎನ್ನುವ ಮೂಲಕ ದೆಹಲಿ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದರು.
ಬಿಜೆಪಿ ಚುನಾವಣಾ ಭರವಸೆಗಳನ್ನು ತಕ್ಷಣಕ್ಕೆ ಈಡೇರಿಸುವ ಕುರಿತು ಮಾತಾಡಿದ ಅವರು, ಫೆ 8ರ ಬಳಿಕ ಬಿಜೆಪಿ ಸರ್ಕಾರವೂ ನಿಗದಿತ ಸಮಯದಲ್ಲಿ ನಿಮಗೆ ನೀಡಿದ ಆಶ್ವಾಸನೆಗಳನ್ನು ಪೂರ್ಣಗೊಳಿಸುತ್ತದೆ. ಇದು ಮೋದಿಯ ಗ್ಯಾರಂಟಿ. ಇಂದು ಮೋದಿ ಗ್ಯಾರಂಟಿ ಎಂದರೆ, ಎಲ್ಲಾ ಗ್ಯಾರಂಟಿಗಳು ಪೂರ್ಣಗೊಳ್ಳುತ್ತದೆ ಎಂಬ ಖಾತ್ರಿ ಎಂದರು.