ಎರ್ನಾಕುಲಂ (ಕೇರಳ) :ಜಿಲ್ಲೆಯ ಕುಟ್ಟಂಪುಳ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಮೂವರು ಮಹಿಳೆಯರನ್ನು ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು 16 ಗಂಟೆಗಳ ತೀವ್ರ ಶೋಧದ ನಂತರ ಪತ್ತೆ ಮಾಡಿದ್ದಾರೆ. ಮಾಯಾ ಜಯನ್, ಪಾರುಕುಟ್ಟಿ ಮತ್ತು ಡಾರ್ಲಿ ನಾಪತ್ತೆಯಾದವರು.
ಕಾಣೆಯಾದ ಹಸು ಹುಡುಕಲು ಮೂವರು ಗುರುವಾರ ಕಾಡಿಗೆ ಹೋಗಿದ್ದಾರೆ. ಆದರೆ, ಕಾಡು ಆನೆಗಳ ಹಿಂಡು ಎದುರಾದ ನಂತರ ದಾರಿ ತಪ್ಪಿದ್ದಾರೆ. ಆನೆಗಳ ಸ್ವರ್ಗವೆಂದು ಹೆಸರಾದ ಸುಮಾರು ಆರು ಕಿಲೋಮೀಟರ್ ದೂರದ ಅರಕ್ಕಮುತಿಯಲ್ಲಿ ಮಹಿಳೆಯರು ಸಿಲುಕಿದ್ದರು. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.
ಹುಡುಕಾಟ ಪ್ರಾರಂಭ : ಬುಧವಾರದಂದು ಮಾಯಾ ಎಂಬುವವರ ಹಸು ನಾಪತ್ತೆಯಾದಾಗ ಇವರಿಗೆ ತೊಂದರೆ ಸಿಲುಕಿದ್ದಾರೆ. ಮರುದಿನ ಬೆಳಗ್ಗೆ ಮಾಯಾ ಅದನ್ನು ಹುಡುಕಲು ಏಕಾಂಗಿಯಾಗಿ ಕಾಡಿಗೆ ಹೊರಟಿದ್ದಾರೆ. ಆದರೆ, ಹಸು ಸಿಗದೆ ಬರಿಗೈಯಲ್ಲಿಯೇ ಹಿಂದಿರುಗಿದ್ದಾರೆ. ಅದೇ ದಿನ ಮಧ್ಯಾಹ್ನ ಸುಮಾರು 3:00 ಗಂಟೆಗೆ ಅವರು ಮುನಿಪ್ಪಾರ ಬಳಿಯ ತೇಗದ ತೋಟದ ಮೂಲಕ ಪಾರುಕುಟ್ಟಿ ಮತ್ತು ಡಾರ್ಲಿಯೊಂದಿಗೆ ಮತ್ತೆ ಕಾಡಿಗೆ ಪ್ರವೇಶಿಸಿದ್ದಾರೆ. ಅಷ್ಟರಲ್ಲಿ ಹಸು ತಾನಾಗಿಯೇ ಮನೆಗೆ ಮರಳಿದೆ. ಆದರೆ, ಹಿಂದಿರುಗುವಾಗ ಮಾಯಾ ತನ್ನ ಪತಿಗೆ ಕಾಡು ಆನೆಗಳ ಹಿಂಡು ಕಂಡಿರುವುದಾಗಿ ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಫೋನ್ನಲ್ಲಿ ಸಂಪರ್ಕಿಸಲು ಸಾಧ್ಯವಾಗಿಲ್ಲ. ಈ ವೇಳೆ ಆನೆಗಳಿಂದ ತಪ್ಪಿಸಿಕೊಳ್ಳಲು ಮೂವರು ಓಡಿಹೋಗಿದ್ದು, ನಂತರ ಅವರು ಕಾಡಿನಲ್ಲಿ ನಾಪತ್ತೆಯಾಗಿದ್ದರು.
ಸವಾಲಿನ ಶೋಧ ಕಾರ್ಯಾಚರಣೆ :ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರು ಸೇರಿದಂತೆ 50 ಜನರ ತಂಡದೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು. ನಾಲ್ಕು ಗುಂಪುಗಳಾಗಿ ವಿಂಗಡಿಸಲಾದ ಶೋಧನಾ ದಳವು ಮಹಿಳೆಯರನ್ನು ಹುಡುಕಲು ಹೊರಟಿತು.
ಆದರೆ, ಆನೆಗಳಿಂದ ಎದುರಾಗುವ ಅಪಾಯ ಮತ್ತು ಕತ್ತಲೆಯಿಂದಾಗಿ ಎರಡು ಗುಂಪುಗಳು ಶೋಧ ಕಾರ್ಯಾಚರಣೆಯನ್ನ ನಿಲ್ಲಿಸಿ ಹಿಂತಿರುಗಬೇಕಾಯಿತು. ಸವಾಲುಗಳ ಹೊರತಾಗಿಯೂ ಎರಡು ಗುಂಪುಗಳು ರಾತ್ರಿಯಿಡೀ ಕಾಡಿನಲ್ಲಿಯೇ ಇದ್ದವು ಮತ್ತು ಹುಡುಕಾಟದಲ್ಲಿ ಸಹಾಯ ಮಾಡಲು ಡ್ರೋನ್ ನಿಯೋಜಿಸಲಾಯಿತು. ತಂಡವು ಮಹಿಳೆಯರ ಮೊಬೈಲ್ ಫೋನ್ ಸ್ಥಳವನ್ನು ಸಹ ಟ್ರ್ಯಾಕ್ ಮಾಡಿದೆ. ಬೆಳಗಿನ ವೇಳೆಗೆ ರಕ್ಷಣಾ ತಂಡ ಅರಕ್ಕಮುತ್ತಿಯಲ್ಲಿನ ಬಂಡೆಯ ಮೇಲೆ ಆಶ್ರಯ ಪಡೆದಿದ್ದ ನಾಪತ್ತೆಯಾದ ಮಹಿಳೆಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.