ಹೈದರಾಬಾದ್:ತೆಲುಗು ನಟಿ ಸಮಂತಾ ಮತ್ತು ನಟ ಅಕ್ಕಿನೇನಿ ನಾಗಚೈತನ್ಯ ಅವರ ವಿಚ್ಛೇದನಕ್ಕೆ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಕಾರಣ ಎಂಬ ತೆಲಂಗಾಣ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಬುಧವಾರ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗ ಬಿಆರ್ಎಸ್ ನಾಯಕನ ಮೇಲೆ ತೀವ್ರ ವಾಗ್ದಾಳಿ ನಡೆಸಿದ ತೆಲಂಗಾಣ ಸಚಿವೆ, ಕೆಟಿಆರ್ ಒಬ್ಬ ಮಾದಕ ದ್ರವ್ಯಗಳ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ತಾನು ಡ್ರಗ್ಸ್ ತೆಗೆದುಕೊಳ್ಳುವುದಲ್ಲದೇ, ಚಿತ್ರರಂಗದ ನಾಯಕಿಯರಿಗೂ ಈ ಚಟವನ್ನು ಕಲಿಸಿದ್ದಾನೆ. ಈತನ ದೌರ್ಜನ್ಯದಿಂದಾಗಿ ಹಲವು ನಾಯಕಿಯರು ಸಿನಿಮಾ ಕ್ಷೇತ್ರವನ್ನೇ ತೊರೆದಿದ್ದಾರೆ. ಇನ್ನು ಕೆಲವರು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಈಚೆಗೆ ಒಡೆದು ಹಾಕಿರುವ ನಾಗಾರ್ಜುನ ಒಡೆತನದ ಎನ್- ಕನ್ವೆನ್ಷನ್ ಸೆಂಟರ್ ಬೇಡ ಎಂದಾದಲ್ಲಿ ತನ್ನ ಬಳಿಗೆ ಅವರನ್ನು ಕಳುಹಿಸುವಂತೆ ಮಾಜಿ ಸಚಿವ ಕೆಟಿಆರ್ ನಟ ನಾಗಾರ್ಜುನ ಬಳಿ ಬೇಡಿಕೆ ಇಟ್ಟಿದ್ದ. ಅವರ ಬಳಿ ಹೋಗುವಂತೆ ನಟಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ವಿರೋಧಿಸಿದ್ದರು. ಇದೇ ವಿಚಾರಕ್ಕಾಗಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಳ್ಳಲು ಕಾರಣವಾಯಿತು ಎಂದಿದ್ದಾರೆ.
ಇಷ್ಟು ಮಾತ್ರವಲ್ಲ, ಬಿಆರ್ಎಸ್ ನಾಯಕ ಕೆಟಿಆರ್ ಅನೇಕ ಜನರಿಗೆ ತೊಂದರೆ, ಕೊಟ್ಟಿದ್ದು ಬ್ಲ್ಯಾಕ್ಮೇಲ್ ಮಾಡಿ ಹೆದರಿಸಿದ್ದಾನೆ. ತನ್ನ ವಿರುದ್ಧವೂ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.