ಕಥುವಾ(ಜಮ್ಮು ಕಾಶ್ಮೀರ):ಕಥುವಾದಲ್ಲಿ ರಕ್ತಪಾತ ಹರಿಸಿರುವ ಉಗ್ರರು ಸಮೀಪದ ಅರಣ್ಯ ಪ್ರದೇಶಗಳಿಗೆ ಪಲಾಯನ ಮಾಡಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಭಾರೀ ಮಂಜು ಮುಸುಕಿರುವ ವಾತಾವರಣ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ಉಗ್ರರು ನಿನ್ನೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಐವರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡರೆ, 10ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು.
ಉಗ್ರರು ಮೊದಲು ಗ್ರೆನೇಡ್ ಎಸೆದಿದ್ದಾರೆ. ನಂತರ ಗುಂಡು ಹಾರಿಸಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು. ಆದರೆ, ದಾಳಿಯ ನಂತರ ಉಗ್ರರು ಸಮೀಪದ ಅರಣ್ಯಕ್ಕೆ ಪಲಾಯನ ಮಾಡಿದರು ಎಂದು ಸೇನಾ ಮೂಲಗಳು ತಿಳಿಸಿವೆ.
ರಾಜನಾಥ್ ಸಿಂಗ್ ಪ್ರತಿಕ್ರಿಯೆ:ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ. 'ನಮ್ಮ ವೀರ ಯೋಧರ ಸಾವಿನಿಂದ ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಈ ಸಂಕಷ್ಟದ ಸಮಯದಲ್ಲಿ ದೇಶ ಅವರ ಜೊತೆಗೆ ನಿಂತಿದೆ. ಗಾಯಗೊಂಡ ಯೋಧರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳು ನಡೆಯುತ್ತಿವೆ' ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಕಾರ್ ರಸೂಲ್ ವಾನಿ ಮತ್ತು ಇತರ ಹಲವು ನಾಯಕರು ದಾಳಿಯನ್ನು ಖಂಡಿಸಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿ 28 ಜನರ ಭದ್ರತೆ ಹಿಂತೆಗೆತ - security cover withdrawal