ಮುಂಬೈ: ಬಾಲಿವುಡ್ ಸೇರಿದಂತೆ ಮಹಾರಾಷ್ಟ್ರದ ಜನರನ್ನು ಬೆಚ್ಚಿಬೀಳಿಸಿದ ಎನ್ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಎಲ್ಲಾ ಆಯಾಮಗಳಿಂದ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದ್ದು, ಈ ವೇಳೆ, ಪೊಲೀಸರ ವಾಟ್ಸ್ಆ್ಯಪ್ಗೆ ಬೆದರಿಕೆ ಸಂದೇಶವೊಂದು ಬಂದಿರುವುದು ಎಲ್ಲರನ್ನೂ ಆಘಾತಗೊಳಿಸಿದೆ.
ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ವ್ಯವಹಾರದ ನಂಟು ಇದೆಯಾ ಎಂಬ ಕುರಿತು ಸ್ಲಂ ಪುನರಾಭಿವೃದ್ಧಿ ಪ್ರಾಧಿಕಾರ ಮತ್ತು ನಟ ಸಲ್ಮಾನ್ ಖಾನ್ ಜೊತೆಗಿನ ಆತ್ಮೀಯತೆ ಕುರಿತಂತೆ ಎಲ್ಲ ಆಯಾಮಗಳಲ್ಲಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಸಂದೇಶದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ನಡುವಿನ ವಿವಾದವನ್ನು ಕೊನೆಗೊಳಿಸಬೇಕಾದರೆ, ಸಲ್ಮಾನ್ ಖಾನ್ ಐದು ಕೋಟಿ ಮೊತ್ತವನ್ನು ನೀಡುವಂತೆ ಬೇಡಿಕೆ ಇಡಲಾಗಿದೆ.
ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಈಗಾಗಲೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತಿದೆ. ಈ ನಡುವೆ ಮತ್ತೆ ಅದೇ ತಂಡ ಮತ್ತೊಂದು ಜೀವ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ. ಆದರೆ, ಈ ಸಂದೇಶವೂ ಪೊಲೀಸರ ವಾಟ್ಸ್ಆ್ಯಪ್ ನಂಬರ್ಗೆ ಬಂದಿರುವುದು ಅಚ್ಚರಿ ಮೂಡಿಸಿದೆ. ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಘಟಕಕ್ಕೆ ಈ ಸಂದೇಶ ರವಾನೆಯಾಗಿದೆ. ಸಂದೇಶ ರವಾನಿಸಿದ ಅಪರಿಚಿತರು ತಾವು ಲಾರೆನ್ಸ್ ಬಿಷ್ಣೋಯಿ ಆಪ್ತರು ಎಂದು ಹೇಳಿಕೊಂಡಿದ್ದಾರೆ