ಮುಂಬೈ, ಮಹಾರಾಷ್ಟ್ರ: ಮುಫ್ತಿ ಸಲ್ಮಾನ್ ಅವರನ್ನು ಗುಜರಾತ್ ಪೊಲೀಸರು ಘಾಟ್‌ಕೋಪರ್‌ನಲ್ಲಿ ಬಂಧಿಸಿದ್ದಾರೆ. ಗುಜರಾತ್‌ನ ಜುನಾಗಢ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಫ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ, ಜುನಾಗಢ ಪೊಲೀಸರು ಮಫ್ತಿ ಸಲ್ಮಾನ್ ಮತ್ತು ಇತರ ಇಬ್ಬರು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಹಿನ್ನೆಲೆ ಗುಜರಾತ್ ಎಟಿಎಸ್ ಪೊಲೀಸರು ಮೊದಲು ಇಬ್ಬರು ಸಂಘಟಕರನ್ನು ಬಂಧಿಸಿದ್ದರು. ಆದರೆ, ಈ ವೇಳೆ ಮುಫ್ತಿ ಸಲ್ಮಾನ್ ತಲೆಮರೆಸಿಕೊಂಡಿದ್ದರು. ಇವರನ್ನು ಗುಜರಾತ್ ಎಟಿಎಸ್ ವಿಕ್ರೋಲಿ ಪ್ರದೇಶದಿಂದ ಹಿಡಿದು ಘಾಟ್‌ಕೋಪರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇನ್ನು ಮುಫ್ತಿ ಸಲ್ಮಾನ್ ಬಂಧನವಾಗುತ್ತಿದ್ದಂತೆ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ಮುಸ್ಲಿಂ ಸಮುದಾಯದ ಗುಂಪು ಜಮಾಯಿಸಲು ಪ್ರಾರಂಭಿಸಿತು. ನಂತರ ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಗೊಂಡಿತು. ಘಾಟ್‌ಕೋಪರ್ ಪೊಲೀಸ್ ಠಾಣೆಯ ಹೊರಗೆ ಮುಸ್ಲಿಂ ಸಮುದಾಯದ ಜನರು ಜಮಾಯಿಸಿದ್ದು, ಪೊಲೀಸರು ಗುಂಪು ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ. ಇನ್ನು ಸಲ್ಮಾನ್ ಮುಂಬೈನಲ್ಲಿರುವುದು ಗುಜರಾತ್ ಪೊಲೀಸರಿಗೆ ಗೊತ್ತಾದ ತಕ್ಷಣ ಗುಜರಾತ್ ಎಟಿಎಸ್ ಮತ್ತು ಮುಂಬೈ ಎಟಿಎಸ್ ನೆರವಿನಿಂದ ಸಲ್ಮಾನ್ನನ್ನು ಬಂಧಿಸಲಾಗಿತ್ತು.
ಬಂಧನಕ್ಕೆ ವಿರೋಧ:ಬಂಧನದ ಕುರಿತಂತೆ ಮಾತನಾಡಿರುವ ಮೌಲಾನಾ ಮುಫ್ತಿ ಸಲ್ಮಾನ್ ಅಝ್ಹರಿ ಅವರ ವಕೀಲರಾದ ವಕೀಲ ಆರಿಫ್ ಸಿದ್ದಿಕಿ, " ಪೊಲೀಸರು ಟ್ರಾನ್ಸಿಟ್ ರಿಮಾಂಡ್‌ಗೆ ಅರ್ಜಿ ಸಲ್ಲಿಸಿದ್ದರು, ನಾವು ಅದನ್ನು ವಿರೋಧಿಸಿದ್ದೇವೆ ಮತ್ತು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ನಾವು ಹೇಳಿದ್ದೇವೆ. ಅವರನ್ನು 2 ದಿನಗಳ ಟ್ರಾನ್ಸಿಟ್ ರಿಮಾಂಡ್‌ಗೆ ಕಳುಹಿಸಲಾಗಿದೆ. ಅವರನ್ನು ಜುನಾಗಢ (ಗುಜರಾತ್) ಗೆ ಕರೆದೊಯ್ಯಲಾಗುವುದು ಎಂದು ನಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.