ಹರ್ದಾ, ಮಧ್ಯಪ್ರದೇಶ:ಜಿಲ್ಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ (ಹರ್ದಾ ಪಟಾಕಿ ಕಾರ್ಖಾನೆ) ಹಠಾತ್ ಸ್ಫೋಟದಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸಮೀಪದ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ನಗರದ ಮಗರ್ಧಾ ರಸ್ತೆಯಲ್ಲಿರುವ ಅಕ್ರಮ ಪಟಾಕಿ ಕಾರ್ಖಾನೆ ಆಗಿದೆ. ಕಾರ್ಖಾನೆಯಲ್ಲಿ ಪಟಾಕಿ ತಯಾರಿಸಲು ದೊಡ್ಡ ಪ್ರಮಾಣದ ಗನ್ ಪೌಡರ್ ಸಂಗ್ರಹಿಸಲಾಗಿತ್ತು. ಆದರೆ ಸ್ಫೋಟ ಸಂಭವಿಸಿದ್ದು, ಏಳು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಹಲವಾರು ಕಿಲೋಮೀಟರ್ ದೂರದಿಂದ ಕಾಣಿಸುತ್ತಿರುವ ಹೊಗೆ: ಬೆಂಕಿ ಎಷ್ಟರ ಮಟ್ಟಿಗೆ ಹರಡಿತ್ತೆಂದ್ರೆ ಅದರ ಹೊಗೆ ಹಲವಾರು ಕಿಲೋಮೀಟರ್ ದೂರದಿಂದ ಗೋಚರಿಸುತ್ತಿತ್ತು. ಕಾರ್ಖಾನೆ ಸ್ಫೋಟದಿಂದಾಗಿ ಉರಿಯುತ್ತಿರುವ ಜ್ವಾಲೆ ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಬೆಂಕಿಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಸ್ಫೋಟದ ಬಗ್ಗೆ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ:ಹರ್ದದ ಮಗರ್ಧಾ ರಸ್ತೆಯಲ್ಲಿರುವ ಬೈರಾಗರ್ ಗ್ರಾಮದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಆ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ ರಸ್ತೆಯಲ್ಲಿ ಸಾಗುತ್ತಿದ್ದವರೂ ಬೆಂಕಿ ಕೆನ್ನಾಲಗೆಯಿಂದ ತತ್ತರಿಸಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದರ ಬಗ್ಗೆ ವರದಿಗಳಿವೆ. ಅಲ್ಲದೆ, ಸಮೀಪದ 50ಕ್ಕೂ ಹೆಚ್ಚು ನಿವಾಸಿಗಳ ಮನೆಗಳಿಗೂ ಬೆಂಕಿ ವ್ಯಾಪಿಸಿದ್ದು, ಮನೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಅಷ್ಟೇ ಅಲ್ಲ ಏಳು ಜನ ಮೃತಪಟ್ಟಿದ್ದು, ಮೃತದೇಹಗಳು ರಸ್ತೆಯ ಮೇಲೆ ಛಿದ್ರವಾಗಿ ಬಿದ್ದಿದ್ದವು ಎಂದು ಪ್ರತ್ಯೇಕ್ಷ ದರ್ಶಿಗಳ ಮಾತಾಗಿದೆ.