ಜೆಹಾನಾಬಾದ್ (ಬಿಹಾರ):ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಜಲಾಭಿಷೇಕಕ್ಕಾಗಿ ಹಲವಾರು ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಶಿವಭಕ್ತರು ದೇವಾಲಯಕ್ಕೆ ಬಂದಿದ್ದ ಸಮಯದಲ್ಲಿ ನೂಕುನುಗ್ಗಲು ಉಂಟಾಗಿದೆ. ಮೃತಪಟ್ಟವರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ. ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ವನವರ ಬೆಟ್ಟದಲ್ಲಿರುವ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಜಲಾಭಿಷೇಕಕ್ಕೆ ಅನೇಕ ಜನರು ಸೇರಿದ್ದರು. ರಾತ್ರಿ 12 ಗಂಟೆಯ ನಂತರ ಕಾಲ್ತುಳಿತದ ಘಟನೆ ನಡೆದಿದೆ ಎನ್ನಲಾಗಿದೆ.
ಮೃತರನ್ನು ಗಯಾ ಜಿಲ್ಲೆಯ ಮೋರ್ ಟೇಕ್ರಿ ನಿವಾಸಿ ಪೂನಂ ದೇವಿ, ಮಖ್ದುಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಡೋವಾ ಗ್ರಾಮದ ನಿಶಾ ಕುಮಾರಿ, ಜಲ್ ಬಿಘಾ ನಡೋಲ್ನ ಸುಶೀಲಾ ದೇವಿ ಮತ್ತು ನಗರದ ಎರ್ಕಿ ಗ್ರಾಮದ ನಿಶಾ ದೇವಿ ಎಂದು ಗುರುತಿಸಲಾಗಿದೆ. ರಾಜು ಕುಮಾರ್ ಮತ್ತು ಪ್ಯಾರೆ ಪಾಸ್ವಾನ್ ಸೇರಿದ್ದಾರೆ. ಆದರೆ, ಓರ್ವ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಆ ಮಹಿಳೆಯ ಗುರುತು ಪತ್ತೆ ಮಾಡಲು ನಿರತರಾಗಿದ್ದಾರೆ.
''ಎಲ್ಲರೂ ಜಲಾಭಿಷೇಕಕ್ಕಾಗಿ ವನವಾರಕ್ಕೆ ತೆರಳಿದ್ದರು. ಜನರು ಬೆಟ್ಟವನ್ನು ಹತ್ತುತ್ತಿದ್ದರು ಮತ್ತು ಕೆಲವರು ಇಳಿಯುತ್ತಿದ್ದರು, ಈ ವೇಳೆ ನೂಕುನುಗ್ಗಲು ಉಂಟಾಯಿತು. ಇಲ್ಲಿ ಪೊಲೀಸ್ ಆಡಳಿತದಿಂದ ಯಾವುದೇ ವ್ಯವಸ್ಥೆ ಇರಲಿಲ್ಲ. ನೂಕುನುಗ್ಗಲು ತಡೆಯುವ ಬದಲು ಪೊಲೀಸರು ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಈ ವೇಳೆ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿಕರು ಹೇಳಿದರು.
ಸೋಮವಾರದ ಕಾರಣ ಅಪಾರ ಭಕ್ತಾದಿಗಳು ನೆರೆದಿದ್ದರು. ಬಾಬಾ ಸಿದ್ಧೇಶ್ವರನಾಥ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ತಲಾಲ ಗಂಗಾ ಮತ್ತು ಗೌಘಾಟ್ ಮೂಲಕ ಪರ್ವತವನ್ನು ತಲುಪಿದರು. ಇದರಿಂದ ದೇವಸ್ಥಾನದ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಮಹಿಳೆಯರು ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.