ಕರ್ನಾಟಕ

karnataka

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರತ್ಯೇಕ ಸರ್ಕಾರ; ಸಿಎಂ ವಿರುದ್ಧ ಕುಕಿ ಸಮುದಾಯ ​​ಹೋರಾಟ - Kuki community protests

By PTI

Published : Aug 31, 2024, 6:32 PM IST

ಜನಾಂಗೀಯ ಹಿಂಸಾಚಾರದ ಭಾಗವಾಗಿದ್ದ ಕುಕಿ ಸಮುದಾಯ ಮತ್ತೊಂದು ಹೋರಾಟಕ್ಕೆ ಮುಂದಾಗಿದೆ. ಪ್ರತ್ಯೇಕ ಸರ್ಕಾರ, ಸಿಎಂ ವಿರುದ್ಧ ಬೃಹತ್​​ ರ್ಯಾಲಿ ಆರಂಭಿಸಿದೆ.

ಸಿಎಂ ವಿರುದ್ಧ ಕುಕಿ ಸಮುದಾಯ ​​ಹೋರಾಟ
ಸಿಎಂ ವಿರುದ್ಧ ಕುಕಿ ಸಮುದಾಯ ​​ಹೋರಾಟ (ETV Bharat)

ಇಂಫಾಲ (ಮಣಿಪುರ):ಜನಾಂಗೀಯ ಹಿಂಸಾಚಾರದಿಂದಾಗಿ ಮಣಿಪುರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವಿನ ಸಂಘರ್ಷ ಈವರೆಗೆ 200 ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಸದ್ಯ ತಣ್ಣಗಾಗಿರುವ ರಾಜ್ಯದಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ.

ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಹೇಳಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಸಂಗತಿಗಳ ವೈರಲ್​​ ವಿಡಿಯೋ ವಿರುದ್ಧ ಮತ್ತು ತಮಗೆ ಪ್ರತ್ಯೇಕ ಸರ್ಕಾರ ನೀಡಬೇಕು ಎಂದು ಕೋರಿ ಕುಕಿ ಸಮುದಾಯ ಶನಿವಾರ ರಾಜ್ಯದ ಹಗಲವು ಭಾಗಗಳಲ್ಲಿ ಬೃಹತ್​ ರ್ಯಾಲಿ ನಡೆಸಿತು.

ಸಿಎಂ ಬಿರೇನ್ ಸಿಂಗ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುಕಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಕ್ಲಿಪ್​ಗಳು ಹರಿದಾಡುತ್ತಿವೆ. ಇದರ ವಿರುದ್ಧ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಈಗಿನ ಸರ್ಕಾರ ಸಮುದಾಯದ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಚುರಾಚಂದ್‌ಪುರ ಜಿಲ್ಲೆಯ ಲೀಶಾಂಗ್‌, ಕಾಂಗ್‌ಪೋಕ್ಪಿಯ ಕೀತೆಲ್‌ಮಾನ್ಬಿ, ತೆಂಗ್‌ನೌಪಾಲ್‌ನ ಮೋರೆ ಪ್ರದೇಶಗಳಲ್ಲಿ ಕುಕಿಗಳು ರ್ಯಾಲಿ ನಡೆಸಿದ್ದಾರೆ. ಚುರಾಚಂದ್‌ಪುರದಲ್ಲಿ ಪ್ರತಿಭಟನಾ ರ್ಯಾಲಿಯು ಲೀಶಾಂಗ್‌ನಲ್ಲಿರುವ ಆಂಗ್ಲೋ ಕುಕಿ ವಾರ್ ಗೇಟ್‌ನಿಂದ ಪ್ರಾರಂಭವಾಯಿತು. 6 ಕಿಮೀ ದೂರ ಕ್ರಮಿಸಿ ತುಯಿಬೌಂಗ್‌ನ ಶಾಂತಿ ಮೈದಾನದಲ್ಲಿ ಮುಕ್ತಾಯವಾಯಿತು.

ಕುಕಿ ಸಮುದಾಯದ ರ್ಯಾಲಿಯಿಂದಾಗಿ ಜಿಲ್ಲೆಯ ಎಲ್ಲಾ ಮಾರುಕಟ್ಟೆಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿತ್ತು. ಅದಾಗ್ಯೂ ವ್ಯಾಪಾರಸ್ಥರು, ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆ ಮಾಡುವಂತೆ ಆಯುಕ್ತ ಎನ್. ಅಶೋಕ್ ಕುಮಾರ್ ಒತ್ತಾಯಿಸಿದ್ದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರ ಜಿ ಕಿಪ್‌ಗೆನ್, "ಕುಕಿ ಜನರಿಗೆ ಪ್ರತ್ಯೇಕ ಆಡಳಿತ ಮತ್ತು ಪ್ರದೇಶವನ್ನು ರೂಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಇದನ್ನು ಸರ್ಕಾರ ಕಾರ್ಯಗತಕ್ಕೆ ತರಬೇಕು. ಮುಖ್ಯಮಂತ್ರಿ ಬಿರೇನ್​ ಸಿಂಗ್​ ಅವರು ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆಯೂ ಪ್ರತಿಭಟನೆ ನಡೆಸಲಾಗುವುದು ಎಂದರು.

ಸರ್ಕಾರದ ಸ್ಪಷ್ಟನೆ ಏನು?:ಸಿಎಂ ಬಿರೇನ್​ ಸಿಂಗ್​ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೋಗಳು ನಕಲಿಯಾಗಿವೆ. ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶಾಂತಿ ಕ್ರಮಗಳನ್ನು ನಾಶ ಮಾಡಲು ಮುಖ್ಯಮಂತ್ರಿಗಳ ಧ್ವನಿಯಲ್ಲಿ ತಪ್ಪಾದ ಹೇಳಿಕೆಗಳ ಆಡಿಯೋ ಕ್ಲಿಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಮಣಿಪುರ ಸರ್ಕಾರ ಹೇಳಿದೆ.

2023 ರಲ್ಲಿ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಅಧಿಕೃತ ಮಾಹಿತಿಯ ಪ್ರಕಾರ, ಘರ್ಷಣೆಯಲ್ಲಿ 226 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಐವರ ಗುಂಡಿಟ್ಟು ಹತ್ಯೆ

ABOUT THE AUTHOR

...view details