ಮಲಪ್ಪುರಂ (ಕೇರಳ):ತನ್ನಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕೇರಳ ನ್ಯಾಯಾಲಯ 141 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಲಮಗಳ ಮೇಲೆ ಹಲವು ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ್ದ ಮಲತಂದೆಗೆ ಕೇರಳದ ನ್ಯಾಯಾಲಯ 141 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ಮಂಜೇರಿ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಶ್ರಫ್ ಎ. ಎಂ. ಅವರು ಪೋಕ್ಸೊ ಕಾಯ್ದೆ, ಐಪಿಸಿ ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಒಟ್ಟು 141 ವರ್ಷಗಳವರೆಗೆ ವಿವಿಧ ಅವಧಿಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
ನವೆಂಬರ್ 29 ರ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ವಿವಿಧ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು. ಜತೆಗೆ ಅಪರಾಧಿಗೆ 7.85 ಲಕ್ಷ ರೂ. ದಂಡ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಂತೆಯೂ ಕೋರ್ಟ್ ಆದೇಶಿಸಿದೆ.
ಅಪರಾಧಿ ಮತ್ತು ಸಂತ್ರಸ್ತೆ ತಮಿಳುನಾಡು ಮೂಲದವರಾಗಿದ್ದು, ಮಲತಂದೆ 2017 ರಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿ ತನ್ನ ಸ್ನೇಹಿತೆಯ ಸಲಹೆಯ ಮೇರೆಗೆ ಅಂತಿಮವಾಗಿ ತನ್ನ ತಾಯಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪತ್ನಿಯ ಕಿರುಕುಳಕ್ಕೆ ಬೇಸತ್ತು ಮನೆಯಿಂದ ಓಡಿ ಹೋದ ಪತಿ; ಇದು ಕಥೆ ಅಲ್ಲ, ವ್ಯಥೆ!