ಮುಂಬೈ (ಮಹಾರಾಷ್ಟ್ರ):'ನಾನು ಬಂದೆ, ನೋಡಿದೆ, ಗೆದ್ದೆ' ಇದು ರೋಮನ್ ಚಕ್ರಾಧಿಪತಿ ಜೂಲಿಯಸ್ ಸೀಸರ್ನ ಸಾಮ್ರಾಜ್ಯ ವಿಸ್ತರಣೆಯ ಝಲಕ್. ಇದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಸೂಕ್ತವಾಗಿ ಹೊಂದುವ ಸಾಲು.
ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಯು 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದು, ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ಸಿಎಂ ಗಾದಿ ಏರುವ ಸಾಧ್ಯತೆಗಳು ದಟ್ಟವಾಗಿದೆ.
ಕಾರ್ಪೊರೇಟರ್ ಸ್ಥಾನದಿಂದ ಹಿಡಿದು ನಾಗ್ಪುರದ ಕಿರಿಯ ಮೇಯರ್ ಆಗಿ, ಮಹಾರಾಷ್ಟ್ರದ ಮೊದಲ ಬಿಜೆಪಿ ಮುಖ್ಯಮಂತ್ರಿ ಹುದ್ದೆ ಪಡೆದಿದ್ದು ದೇವೇಂದ್ರ ಫಡ್ನವೀಸ್ರ ರಾಜಕೀಯ ಹಾದಿಯೇ ಅತ್ಯದ್ಭುತ. ಎಲ್ಲವೂ ಅಂದುಕೊಂಡಂತೆ ಜರುಗಿದರೆ, ಮಹಾರಾಷ್ಟ್ರದ ಚುಕ್ಕಾಣಿಯನ್ನು ಮೂರನೇ ಬಾರಿಗೆ ಹಿಡಿಯಲಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾದ ಬ್ರಾಹ್ಮಣ ಸಮುದಾಯದ ಎರಡನೇ ನಾಯಕ:ಮರಾಠ ರಾಜಕಾರಣ, ಆ ಸಮುದಾಯದ ರಾಜಕಾರಣಿಗಳ ಹಿಡಿತ, ಆರ್‌ಎಸ್‌ಎಸ್ ಪ್ರಭಾವ ಇರುವ ರಾಜ್ಯದಲ್ಲಿ 54 ವರ್ಷದ ದೇವೇಂದ್ರ ಅವರು ರಾಜ್ಯದ ಮುಖ್ಯಮಂತ್ರಿಯಾದ ಬ್ರಾಹ್ಮಣ ಸಮುದಾಯದ ಎರಡನೇ ನಾಯಕ. ಅಖಂಡ ಶಿವಸೇನೆಯ ಮನೋಹರ್ ಜೋಶಿ ಅವರು ಸಿಎಂ ಆದ ಮೊದಲ ಬ್ರಾಹ್ಮಣರಾಗಿದ್ದರು.
‘ದೇವೇಂದ್ರ ಅವರು ದೇಶಕ್ಕೆ ನಾಗ್ಪುರ ನೀಡಿದ ಕೊಡುಗೆ:ಮೃದು ಸ್ವಭಾವಿ, ವಿನಮ್ರ ಮಾತಿನ ಫಡ್ನವೀಸ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸಾರ್ಹ ನಾಯಕ. ಚುನಾವಣಾ ಪ್ರಚಾರದ ವೇಳೆ ಮೋದಿ ಅವರೇ, ‘ದೇವೇಂದ್ರ ಅವರು ದೇಶಕ್ಕೆ ನಾಗ್ಪುರ ನೀಡಿದ ಕೊಡುಗೆ’ ಎಂದು ಬಣ್ಣಿಸಿದ್ದರು.
2014 ರ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ ಮಾಡಿದರೂ, ಪಕ್ಷದ ಅಭೂತಪೂರ್ವ ಜಯದಲ್ಲಿ ಆಗಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಫಡ್ನವೀಸ್‌ಗೆ ಅವರಿಗೆ ಹೆಚ್ಚಿನ ಪಾಲು ಧಕ್ಕಲೇಬೇಕು. ಜನಸಂಘ ಮತ್ತು ನಂತರದಲ್ಲಿ ಬಿಜೆಪಿಯ ನಾಯಕರಾಗಿದ್ದ ದಿವಂಗತ ಗಂಗಾಧರ್ ಫಡ್ನವಿಸ್ ಅವರ ಪುತ್ರರಾದ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು 'ರಾಜಕೀಯ ಗುರು' ಎಂದು ಸಂಭೋದಿಸುತ್ತಾರೆ.
ದೇವೇಂದ್ರರ ರಾಜಕೀಯ ಹಾದಿ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಆರ್ಎಸ್ಎಸ್ನ ವಿದ್ಯಾರ್ಥಿ ಘಟಕ್ಕೆ 1989 ರಲ್ಲಿ ಸೇರುವ ಮೂಲಕ ಅವರು ರಾಜಕೀಯ ಜೀವನವನ್ನು ಆರಂಭಿಸಿದರು. 22 ನೇ ವಯಸ್ಸಿನಲ್ಲಿ, ಅವರು ನಾಗ್ಪುರ ಕಾರ್ಪೊರೇಟರ್ ಮತ್ತು 1997 ರಲ್ಲಿ 27 ನೇ ವಯಸ್ಸಿನಲ್ಲಿ ಅದರ ಮೇಯರ್ ಆದರು. 1999 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಅದಾದ ಬಳಿಕದ ಮೂರು ಚುನಾವಣೆಗಳಲ್ಲೂ ನಿರಂತರ ಗೆಲುವು ಸಾಧಿಸಿದ ಧೀಮಂತ ನಾಯಕ.
ಭ್ರಷ್ಟಾಚಾರ ರಹಿತ ರಾಜಕೀಯ ಜೀವನ ಕಟ್ಟಿಕೊಂಡ ಕೆಲವೇ ರಾಜಕಾರಣಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದ ನೀರಾವರಿ ಹಗರಣದಲ್ಲಿ ಆಂದೋಲನ ಸೃಷ್ಟಿಸಿದ ಕೀರ್ತಿ ಫಡ್ನವೀಸ್‌ಗೆ ಸಲ್ಲುತ್ತದೆ.
2019ರಲ್ಲಿ ಹಿನ್ನಡೆ:2019 ರ ವಿಧಾನಸಭಾ ಚುನಾವಣೆಯಲ್ಲಿ ಫಡ್ನವೀಸ್ ನೇತೃತ್ವ ಹಿನ್ನಡೆ ಅನುಭವಿಸಿತು. ಆಗಿನ ಅಖಂಡ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದರು. ಇದರಿಂದ ಚುನಾವಣಾ ಪೂರ್ವ ಮೈತ್ರಿಯಿಂದ ಪಕ್ಷವು ಹೊರಬಂದಿತು. ಚುನಾವಣೆಯ ಬಳಿಕ ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಂಡೆದ್ದು, ಬಿಜೆಪಿಗೆ ಬೆಂಬಲ ನೀಡಿದರು.
ವಿಶ್ವಾಸಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ಮೂರು ದಿನ ಗಡುವು ನೀಡಿತ್ತು. ಇಷ್ಟರಲ್ಲಿ ಅಜಿತ್ ಪವಾರ್ ನೀಡಿದ್ದ ಬೆಂಬಲ ಹಿಂಪಡೆಯುವ ಮೂಲಕ ಸರ್ಕಾರ ಪತನವಾಗಿ ಫಡ್ನವೀಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಎನ್‌ಸಿಪಿ- ಕಾಂಗ್ರೆಸ್ ಮತ್ತು ಶಿವಸೇನೆ ನೇತೃತ್ವದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದಿತು. ಸೇನೆಯ ಹಿರಿಯ ಏಕನಾಥ್ ಶಿಂಧೆ ಬಂಡೇಳುವ ಮೂಲಕ ಸರ್ಕಾರ ಪತನವಾಯಿತು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದರು. ಸಿಎಂ ಆಗುವ ಅವಕಾಶವಿದ್ದರೂ, ಫಡ್ನವೀಸ್ ಅವರು ಶಿಂಧೆಯನ್ನು ಸಿಎಂ ಮಾಡಿ, ಕೇಂದ್ರ ನಾಯಕರ ಸೂಚನೆಯ ಮೇರೆಗೆ ಉಪಮುಖ್ಯಮಂತ್ರಿಯಾದರು.
2024 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಜಯದ ಹಳಿಗೆ ತಂದಿರುವ ಫಡ್ನವೀಸ್, ಮೂರನೇ ಬಾರಿಗೆ ಸಿಎಂ ಆಗಲಿದ್ದಾರಾ ಎಂಬದು ಎಲ್ಲರ ಕುತೂಹಲವಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಮಹಾಯುತಿಯ ಕಮಾಲ್: ಲಾಡ್ಕಿ ಬಹಿಣ್ ಬ್ರಹ್ಮಾಸ್ತ್ರಕ್ಕೆ ಎಂವಿಎ ಛಿದ್ರ.. ಛಿದ್ರ..