ಕೋಯಿಕ್ಕೋಡ್: ಉದ್ಯೋಗ ಅರಸಿ ಥಾಯ್ಲೆಂಡ್‌ಗೆ ತೆರಳಿದ್ದ ಕೇರಳದ ಮಲಪ್ಪುರಂನ ಇಬ್ಬರು ಯುವಕರನ್ನು ಸಶಸ್ತ್ರ ಗುಂಪು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಸಂಬಂಧಿಕರ ದೂರಿನ ಪ್ರಕಾರ, ಮಲಪ್ಪುರಂನ ವಲ್ಲಿಕಾಪಟ್ಟಾ ನಿವಾಸಿಗಳಾದ ಶುಹೈಬ್ ಮತ್ತು ಸಫೀರ್ ಮಾರ್ಚ್ 27 ರಂದು ಸಂದರ್ಶಕ ವೀಸಾದಲ್ಲಿ ದುಬೈಗೆ ತೆರಳಿದ್ದರು. ನಂತರ ಥಾಯ್ಲೆಂಡ್ ಮೂಲದ ಕಂಪನಿಯೊಂದರಲ್ಲಿ ಕೆಲಸ ಖಾಲಿ ಇರುವುದಾಗಿ ತಿಳಿದು ಬಂದಿದೆ. ಆ ಉದ್ಯೋಗಕ್ಕಾಗಿ ಯುವಕರು ಅರ್ಜಿ ಸಲ್ಲಿಸಿದ್ದಾರೆ. ಬಳಿಕ ಈ ಇಬ್ಬರನ್ನು ಆನ್‌ಲೈನ್ ಮೂಲಕ ಸಂದರ್ಶನ ಮಾಡಿ ಹುದ್ದೆಗೆ ಆಯ್ಕೆ ಆಗಿರುವುದಾಗಿ ತಿಳಿಸಿದ್ದಾರೆ. ನಂತರ ಅವರನ್ನು ಥಾಯ್ಲೆಂಡ್‌ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಇದಕ್ಕಾಗಿ ವಿಮಾನ ಪ್ರಯಾಣದ ಟಿಕೆಟ್ ಕೂಡ ಕಳುಹಿಸಿದ್ದಾರೆ.
ಮೇ 22 ರಂದು ಇಬ್ಬರು ಯುವಕರು ಥಾಯ್ಲೆಂಡ್‌ನ ಸುವರ್ಣಭೂಮಿ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ನಂತರ ಬಂದ ಏಜೆಂಟರು ಕಾರಿನಲ್ಲಿ ಕೂರಿಸಿಕೊಂಡು ಸಶಸ್ತ್ರಗಳೊಂದಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆಂದು ಯುವಕರು ಫೋನ್ ಮೂಲಕ ತಿಳಿಸಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಅಲ್ಲದೇ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವಂತೆ ಒತ್ತಾಯಿಸಿರುವುದಾಗಿಯೂ ಯುವಕರು ತಿಳಿಸಿದ್ದಾರೆ. ಕೆಲಸ ಅರಸಿ ಅಬುಧಾಬಿಯಿಂದ ಥಾಯ್ಲೆಂಡ್‌ಗೆ ಬಂದಿದ್ದ ಯುವಕರು ಇದೀಗ ಮ್ಯಾನ್ಮಾರ್‌ನಲ್ಲಿ ಆನ್‌ಲೈನ್ ವಂಚನೆ ಗ್ಯಾಂಗ್‌ನ ವಶದಲ್ಲಿದ್ದಾರೆ ಎಂದು ಕುಟುಂಬ ಸದಸ್ಯರಿಗೆ ತಿಳಿದು ಬಂದಿದೆ. ಮಲಯಾಳಿಗಳು ಸೇರಿದಂತೆ ಹಲವರು ಈ ಬಲೆಗೆ ಬಿದ್ದಿದ್ದಾರೆ ಎಂದು ಶುಹೈಬ್ ಮತ್ತು ಸಫೀರ್ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ. ಕಾನೂನು ಬಾಹಿರ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕುಟುಂಬ ಸದಸ್ಯರಿಗೆ ಹೇಳಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಕುಟುಂಬಸ್ಥರು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ದೇಶದ್ರೋಹ ಪ್ರಕರಣದಲ್ಲಿ ಶರ್ಜೀಲ್ ಇಮಾಮ್ಗೆ ಜಾಮೀನು - Sharjeel Imam granted bail