ವಯನಾಡ್(ಕೇರಳ):ಕೇರಳ ಕಂಡಿರದ ದೊಡ್ಡ ಭೂಕುಸಿತ ವಯನಾಡ್‌ನಲ್ಲಿ ಇತ್ತೀಚಿಗೆ ನಡೆದಿತ್ತು. ಆಪತ್ಕಾಲದಲ್ಲಿ ರಕ್ಷಕರಿಗೆ ತಲುಪಲು ಇರುವ ಏಕೈಕ ಮಾರ್ಗವಾಗಿದ್ದ ಸೇತುವೆ ಕುಸಿದಿರುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ತೊಡಕಾಗಿತ್ತು. ಈ ಮಧ್ಯೆ ನಿರ್ಮಿಸಿದ್ದ ಕಿರು ಸೇತುವೆಯೂ ಕುಸಿದಿತ್ತು. ನಂತರ ಭಾರತೀಯ ಸೈನ್ಯದ ನೇತೃತ್ವದಲ್ಲಿ ಬೈಲಿ ಸೇತುವೆ ನಿರ್ಮಿಸಲಾಯಿತು.
ನದಿಯ ಪ್ರವಾಹ ಮತ್ತು ಭಾರೀ ಮಳೆಯನ್ನು ಲೆಕ್ಕಿಸದೇ ಹಗಲು ರಾತ್ರಿಯೆನ್ನದೇ ಶ್ರಮಿಸಿದ ಫಲವಾಗಿ ನಿರ್ಮಾಣವಾದ ಸೇತುವೆಯ ಹಿಂದೆ ಭಾರತೀಯ ಸೇನೆಯ ಮಹಿಳಾ ಅಧಿಕಾರಿ ಮೇಜರ್ ಸೀತಾ ಅಶೋಕ್ ಶೆಲ್ಕೆ ಇದ್ದಾರೆ. ಸೀತಾ ಶೆಲ್ಕೆ ಬೈಲಿ ಸೇತುವೆ ನಿರ್ಮಾಣ ಕಾರ್ಯದ ಹಿಂದಿದ್ದ ಎಂಜಿನಿಯರ್. ಈ ಸೇತುವೆ ನಿರ್ಮಾಣವು ಕೇರಳ ಅತೀ ಕುತೂಹಲದಿಂದ ಕಾಯುತ್ತಿದ್ದ ವಿಷಯವಾಗಿತ್ತು. ಏಕೆಂದರೆ ಇದು ರಕ್ಷಣಾ ಕಾರ್ಯಾಚರಣೆಯನ್ನು ಸುಲಭಗೊಳಿಸುವಲ್ಲಿ ನಿರ್ಣಾಯಕವಾಗಿತ್ತು.
ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸೀತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೀತಾ ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಕೇವಲ 600 ಜನರಿರುವ ಗಾಡಿಲ್‌ಗಾಂವ್ ಎಂಬ ಪುಟ್ಟ ಗ್ರಾಮದಿಂದ ಸೇನೆಗೆ ಸೇರಿದ ಸೀತಾ ಶೆಲ್ಕೆ, ಇಂದು ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನಲ್ಲಿ ಅಧಿಕಾರಿ.
ವಕೀಲ ಅಶೋಕ್ ಬಿಖಾಜಿ ಶೆಲ್ಕೆ ಅವರ ನಾಲ್ಕು ಮಕ್ಕಳಲ್ಲಿ ಸೀತಾ ಅಶೋಕ್ ಶೆಲ್ಕೆ ಒಬ್ಬರು. ಸೀತಾ ಅಶೋಕ್ ಶೆಲ್ಕೆ ಅವರು ಅಹ್ಮದ್ ನಗರದ ಲೋನಿಯ ಪ್ರವಾರ ಗ್ರಾಮೀಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದು, ನಂತರ ಸೈನ್ಯಕ್ಕೆ ಸೇರುತ್ತಾರೆ. ಐಪಿಎಸ್ ಅಧಿಕಾರಿಯಾಗುವ ಆಸೆ ಈಡೇರದಿದ್ದಾಗ ಸೇನೆಯ ಭಾಗವಾಗಲು ನಿರ್ಧರಿಸುತ್ತಾರೆ. 2012ರಲ್ಲಿ ಸೈನ್ಯ ಸೇರಿದರು. ತಂದೆ-ತಾಯಿಯ ಬೆಂಬಲವೇ ನನ್ನನ್ನು ಈ ಹಂತಕ್ಕೆ ತಲುಪಿಸಿದೆ ಎನ್ನುತ್ತಾರೆ ಸೀತಾ ಶೆಲ್ಕೆ.
ಬೈಲಿ ಸೇತುವೆಯನ್ನು ಆರ್ಮಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ 250 ಸೈನಿಕರು ನಿರ್ಮಿಸಿದ್ದಾರೆ. ಈ ಕಾರ್ಯದ ನೇತೃತ್ವವನ್ನು ಮೇಜರ್ ಸೀತಾ ಅಶೋಕ್ ಶೆಲ್ಕೆ ವಹಿಸಿದ್ದರು. ಸುದೀರ್ಘ ಹಗಲು, ರಾತ್ರಿ ಶ್ರಮದ ಫಲವಾಗಿ ಸೇತುವೆಯನ್ನು 190 ಅಡಿ ಉದ್ದದಲ್ಲಿ ನಿರ್ಮಿಸಲಾಗಿದೆ. 24 ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಸೇತುವೆಯ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ಭಾರೀ ಯಂತ್ರೋಪಕರಣಗಳನ್ನು ತಲುಪಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಬೇಕಾದ ವಾಹನಗಳು ಇದೇ ಸೇತುವೆಯ ಮೂಲಕ ಸಂಚರಿಸುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇಜರ್ ಸೀತಾ ಶೆಲ್ಕೆ ಮಾತು:"ಸೇತುವೆ ನಿರ್ಮಾಣದಲ್ಲಿ ನಾನು ಏಕೈಕ ಮಹಿಳೆ ಎಂದು ಪರಿಗಣಿಸುವುದಿಲ್ಲ, ನಾನು ಓರ್ವ ಯೋಧೆ. ನಾನು ಭಾರತೀಯ ಸೇನೆಯ ಪ್ರತಿನಿಧಿಯಾಗಿ ಇಲ್ಲಿದ್ದೇನೆ. ಈ ಕಾರ್ಯದಲ್ಲಿ ತಂಡದ ಭಾಗವಾಗಿರುವುದಕ್ಕೆ ಅಪಾರ ಹೆಮ್ಮೆಪಡುತ್ತೇನೆ" ಎಂದು ಮೇಜರ್ ಸೀತಾ ಶೆಲ್ಕೆ ತಿಳಿಸಿದರು. "ಎಲ್ಲಾ ಸ್ಥಳೀಯ ಅಧಿಕಾರಿಗಳು, ರಾಜ್ಯದ ಅಧಿಕಾರಿಗಳು ಮತ್ತು ವಿವಿಧ ಪ್ರದೇಶಗಳಿಂದ ನಮಗೆ ಸಹಾಯ ಮಾಡಿದ ಎಲ್ಲರಿಗೂ ನನ್ನ ಧನ್ಯವಾದ ತಿಳಿಸುತ್ತೇನೆ. ಸ್ಥಳೀಯರು, ಗ್ರಾಮಸ್ಥರು ಮತ್ತು ರಾಜ್ಯ ಅಧಿಕಾರಿಗಳಿಗೆ ವಿಶೇಷ ಧನ್ಯವಾದಗಳು" ಎಂದು ಹೇಳಿದರು.
ಇದನ್ನೂ ಓದಿ:ಬೈಲಿ ಸೇತುವೆ ಎಂದರೇನು? ಇದರ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? - Bailey Bridge