ನವದೆಹಲಿ:ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಗಾಂಧಿ-ಶಾಸ್ತ್ರಿ ಸ್ಮಾರಕಕ್ಕೆ ಗಣ್ಯರು ಭೇಟಿ:ಮಹಾತ್ಮ ಗಾಂಧಿಯವರ 155ನೇ ಜನ್ಮದಿನದ ಹಿನ್ನೆಲೆಯಲ್ಲಿ ರಾಜ್ಘಾಟ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದರು. ಸತ್ಯ, ಸೌಹಾರ್ದತೆ ಮತ್ತು ಸಮಾನತೆಯ ಆಧಾರದ ಮೇಲೆ ಅವರ ಜೀವನ ಮತ್ತು ಆದರ್ಶಗಳು ದೇಶದ ಜನತೆಗೆ ಸದಾ ಸ್ಫೂರ್ತಿದಾಯಕವಾಗಿರುತ್ತವೆ ಎಂದು ಮೋದಿ ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಕೂಡ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು.
"ಎಲ್ಲ ನಾಗರಿಕರ ಪರವಾಗಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 155ನೇ ಜನ್ಮದಿನದಂದು ನಾನು ಅವರಿಗೆ ನನ್ನ ನಮ್ರ ಗೌರವವನ್ನು ಸಲ್ಲಿಸುತ್ತೇನೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ, ''ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಜೀವನದುದ್ದಕ್ಕೂ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಅತ್ಯುನ್ನತ ಆದರ್ಶಗಳನ್ನು ಪ್ರಸ್ತುತಪಡಿಸಿದರು'' ಎಂದು ಹೇಳಿದ್ದಾರೆ.
ಜೈ ಜವಾನ್, ಜೈ ಕಿಸಾನ್:ನಂತರ ಪ್ರಧಾನಿ ಮೋದಿ ಅವರು ವಿಜಯಘಾಟ್‌ನಲ್ಲಿ ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದಂದು ಅವರಿಗೆ ನಮನ ಸಲ್ಲಿಸಿದರು. ''ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೀಡಿದ ಜೈ ಜವಾನ್ ಮತ್ತು ಜೈ ಕಿಸಾನ್ ಘೋಷಣೆ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ. ದೇಶದ ಹೆಮ್ಮೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ'' ಎಂದು ಶ್ಲಾಘಿಸಿದರು.