ಕರ್ನಾಟಕ

karnataka

ETV Bharat / bharat

ಕಾಶಿ ವಿಶ್ವನಾಥ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರ ಭೇಟಿ: 3 ದಿನ VIP ದರ್ಶನ ಸ್ಥಗಿತ - KASHI VISHWANATH TEMPLE

ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ ದರ್ಶನವನ್ನು ರದ್ದುಪಡಿಸಲಾಗಿದೆ.

ಕಾಶಿ ವಿಶ್ವನಾಥ ದೇವಾಲಯ
ಕಾಶಿ ವಿಶ್ವನಾಥ ದೇವಾಲಯ (ians)

By ETV Bharat Karnataka Team

Published : Feb 24, 2025, 12:53 PM IST

ನವದೆಹಲಿ:ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯವು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಫೆಬ್ರವರಿ 25 ರಿಂದ ಫೆಬ್ರವರಿ 27 ರವರೆಗೆ ವಿಐಪಿ 'ದರ್ಶನ'ವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಹಿಂದೂ ಕ್ಯಾಲೆಂಡರ್​ನ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಸಮಯದಲ್ಲಿ ಹೆಚ್ಚಿನ ಜನಸಂದಣಿ ನಿರ್ವಹಿಸಲು ದೇವಾಲಯದ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪೂಜ್ಯ ಸಂತರು, ಸಾಧುಗಳು ಮತ್ತು ನಾಗಾ ಸಾಧುಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನವನ್ನು ಗಮನದಲ್ಲಿಟ್ಟುಕೊಂಡು, ದೇವಾಲಯದ ಟ್ರಸ್ಟ್ ವಿಐಪಿ ದರ್ಶನ ಪ್ರೋಟೋಕಾಲ್ ಅನ್ನು ಮೂರು ದಿನಗಳವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಎಲ್ಲ ಭಕ್ತರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಮಾಡಲಾಗಿರುವ ವ್ಯವಸ್ಥೆಗಳೊಂದಿಗೆ ಸಹಕರಿಸುವಂತೆ ದೇವಾಲಯದ ಸಿಇಒ ಭಕ್ತರನ್ನು ಕೋರಿದ್ದಾರೆ.

ಈ ಮೂರು ದಿನ ಇಲ್ಲ ವಿಶೇಷ ರಿಯಾಯಿತಿ:ಈ ಅವಧಿಯಲ್ಲಿ, ವಿಐಪಿ ಪಾಸ್ ಹೊಂದಿರುವವರು ಸೇರಿದಂತೆ ಎಲ್ಲಾ ಭಕ್ತರು ನಿಯಮಿತ ದರ್ಶನ ವಿಧಾನದಲ್ಲಿಯೇ ದರ್ಶನ ಪಡೆಯಬೇಕಾಗುತ್ತದೆ. ಬೃಹತ್ ಜನಸಂದಣಿಯನ್ನು ಸೂಕ್ತವಾಗಿ ನಿರ್ವಹಿಸಲು ಶಿವನನ್ನು ದೂರದಿಂದ ವೀಕ್ಷಿಸಲು ಅವಕಾಶ ನೀಡಲಾಗುವುದು.

ಫೆಬ್ರವರಿಯ ಮೊದಲ 17 ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ಭಕ್ತರು ಈಗಾಗಲೇ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅದರಲ್ಲೂ ವಿಶೇಷವಾಗಿ ಈಗ ಪ್ರಯಾಗ್ ರಾಜ್​​ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿರುವುದರಿಂದ, ಅಲ್ಲಿಗೆ ಭೇಟಿ ನೀಡುವ ಬಹುತೇಕ ಭಕ್ತರು ಇಲ್ಲಿಗೂ ಬರುವ ನಿರೀಕ್ಷೆಯಿದೆ.

ಹೆಚ್ಚುತ್ತಿದೆ ಟ್ರಾಫಿಕ್​ ಜಾಮ್​;ಕುಂಭಮೇಳಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರು ಈಗಾಗಲೇ ವಾರಾಣಸಿಗೆ ಆಗಮಿಸುತ್ತಿರುವುದರಿಂದ, ಸ್ಥಳೀಯ ಮೂಲ ಸೌಕರ್ಯಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳು ವಾರಾಣಸಿಗೆ ಹರಿದು ಬರುತ್ತಿರುವುದರಿಂದ ಎಲ್ಲ ಕಡೆ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ. ಇದರಿಂದ ಸಂದರ್ಶಕರು ಮತ್ತು ಸ್ಥಳೀಯರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ.

ಜನವರಿ 27 ರಿಂದ ವಾರಾಣಸಿಯಲ್ಲಿ 8 ನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಇಡೀ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಗೊಂದಲವನ್ನು ತಡೆಗಟ್ಟಲು ಮತ್ತು ಜನಸಂದಣಿಯ ಸುಗಮ ಚಲನೆಗಾಗಿ ವಿಶೇಷ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಡಿಸಿಪಿ (ಕಾಶಿ ವಲಯ) ಗೌರವ್ ಬನ್ಸಾಲ್ ಹೇಳಿದ್ದಾರೆ. ಅತ್ಯಧಿಕ ಸಂಖ್ಯೆಯ ಸಂದರ್ಶಕರ ಕಾರಣದಿಂದಾಗಿ ಇಲ್ಲಿನ ನಿವಾಸಿಗಳು ಗಮನಾರ್ಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಇನ್ನೆರಡು ವರ್ಷಗಳಲ್ಲಿ 1.25 ಲಕ್ಷ ರೂಗೆ ಏರಿಕೆಯಾಗಲಿದೆ ಬಂಗಾರ!: ತಜ್ಞರ ಅಂದಾಜು, ಕಾರಣಗಳೇನು? - GOLD PRICE PREDICTION

ABOUT THE AUTHOR

...view details