ಥಾಣೆ: ಅಕ್ಟೋಬರ್ 15 ರಿಂದ ಮಹಾರಾಷ್ಟ್ರದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ನವೆಂಬರ್ 5 ರವರೆಗೆ ಥಾಣೆ ಜಿಲ್ಲೆಯಲ್ಲಿ 13.26 ಕೋಟಿ ರೂ. ಮೌಲ್ಯದ ಮದ್ಯ, ಮಾದಕವಸ್ತು ಮತ್ತು ಜನರಿಗೆ ಉಚಿತವಾಗಿ ನೀಡಲು ಸಂಗ್ರಹಿಸಲಾಗಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಸಾಗಾಟದ ವಸ್ತುಗಳ ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಒಟ್ಟು 209 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ಅಶೋಕ್ ಶಿಂಗಾರೆ ಹೇಳಿದ್ದಾರೆ. ವಿಶೇಷ ವೀಕ್ಷಕ (ವೆಚ್ಚಗಳು) ಬಿ ಆರ್ ಬಾಲಕೃಷ್ಣನ್ ಅವರೊಂದಿಗೆ ಬುಧವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
18 ವಿಧಾನಸಭಾ ಕ್ಷೇತ್ರಗಳಾದ್ಯಂತ 72,29,339 ಮತದಾರರನ್ನು ಹೊಂದಿರುವ ಥಾಣೆ ಜಿಲ್ಲೆಯಲ್ಲಿ ಮುಂಬರುವ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಅಂಕಿ ಸಂಖ್ಯೆಗಳನ್ನು ಶಿಂಗಾರೆ ಹಂಚಿಕೊಂಡರು. ಥಾಣೆ ಜಿಲ್ಲೆಯಲ್ಲಿ 22,82,882 ಮಹಿಳಾ ಮತ್ತು 1,415 ತೃತೀಯ ಲಿಂಗಿ ಮತದಾರರು ಇದ್ದಾರೆ.
ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ 1,72,981 ಮತದಾರರು, 38,149 ವಿಕಲಚೇತನರು ಮತ್ತು 85 ವರ್ಷ ಮೇಲ್ಪಟ್ಟ 56,976 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30,868 ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಲಿದ್ದಾರೆ ಎಂದು ಶಿಂಗಾರೆ ಹೇಳಿದರು.