ಮುಂಬೈ (ಮಹಾರಾಷ್ಟ್ರ):ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಮುಸ್ಲಿಂ ಸಮುದಾಯದ ಒಬ್ಬರಿಗೂ ಟಿಕೆಟ್ ನೀಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಗೆ ನಾಯಕ ಮುಹಮ್ಮದ್ ಆರಿಫ್ ನಸೀಮ್ ಖಾನ್ ರಾಜೀನಾಮೆ ನೀಡಿದ್ದಾರೆ. ಪಕ್ಷದ ಈ ನಿರ್ಧಾರದಿಂದ ಅಲ್ಪಸಂಖ್ಯಾತ ಸಮುದಾಯಗಳ ಜನರು ಮತ್ತು ಸಂಘಟನೆಯವರು ಅಸಮಾಧಾನ ಮತ್ತು ಕೋಪಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಯಾವೊಬ್ಬ ಅಭ್ಯರ್ಥಿಯನ್ನೂ ಕಣಕ್ಕಿಳಿಸಿಲ್ಲ. ಇದರಿಂದ ಅಲ್ಪಸಂಖ್ಯಾತ ಸಮುದಾಯಗಳ ಜನರು ಮತ್ತು ಸಂಘಟನೆಗಳಲ್ಲಿ ಸಾಕಷ್ಟು ಕೋಪ ವ್ಯಕ್ತವಾಗಿದೆ. ನನಗೂ ಸಹ ಬೇಸರವಾಗಿದೆ. ಏಕೆಂದರೆ, ಅಲ್ಪಸಂಖ್ಯಾತ ಸಮುದಾಯ, ಒಬಿಸಿ, ಮರಾಠಾ ಸಮುದಾಯ, ಎಸ್‌ಸಿ ಅಥವಾ ಎಸ್‌ಟಿ ಎಂದು ಲೆಕ್ಕಿಸದೆ ಎಲ್ಲರೂ ಜೊತೆಗೆ ಹೋಗುವುದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದು ನಸೀಮ್ ಖಾನ್ ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯಗಳ ಜನರು ಲೋಕಸಭೆಯಲ್ಲಿ ತಮ್ಮ ಪರವಾದ ಧ್ವನಿಯನ್ನು ನಿರೀಕ್ಷಿಸುತ್ತಾರೆ. ಆದರೆ, ಈ ಬಾರಿ ಅದು ಆಗುತ್ತಿಲ್ಲ. ಪ್ರತಿ ಸಮುದಾಯಕ್ಕೂ ಪ್ರತಿನಿಧಿಗಳನ್ನು ನೀಡುವ ಸಂಪ್ರದಾಯವಿದೆ. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಇಲ್ಲದಿರುವುದಕ್ಕೆ ಕಾರಣವೇನು?. ನಾನು ಪ್ರಚಾರಕ್ಕಾಗಿ ಜನರ ಬಳಿಗೆ ಹೋದರೆ, ಅವರು ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ನನ್ನ ಬಳಿ ಉತ್ತರವಿಲ್ಲ. ಆದ್ದರಿಂದ ನಾನು ಮೂರನೇ, ನಾಲ್ಕು ಮತ್ತು ಐದನೇ ಹಂತದ ಚುನಾವಣೆಗೆ ಪ್ರಚಾರ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದಾರೆ.