ಧುಲೆ, ಮಹಾರಾಷ್ಟ್ರ: ಮಹಾರಾಷ್ಟ್ರದ ವಿಪಕ್ಷ ಮಹಾ ವಿಕಾಸ ಅಘಾಡಿ ಎಂಬ ಬಂಡಿಗೆ ಯಾವುದೆ ಚಕ್ರವಿಲ್ಲ, ಬ್ರೇಕ್ ಕೂಡಾ ಇಲ್ಲ. ಆದರೂ, ಇಂತಹ ವಾಹನದ ಡ್ರೈವರ್ ಸೀಟಿಗಾಗಿ ಕಚ್ಚಾಟ- ಗುದ್ದಾಟ ನಡೆದಿದೆ ಎಂದು ವಿರೋಧ ಪಕ್ಷದ ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆಗೆ ಆರಂಭವಾಗಿದ್ದು, ರಾಜ್ಯದಲ್ಲಿ ಪ್ರಧಾನಿ ಇಂದಿನಿಂದ ಚುನಾವಣಾ ಪ್ರಚಾರ ಸಭೆ ಆರಂಭಿಸಿದ್ದಾರೆ. ಧುಲೆಯಲ್ಲಿ ಇಂದು ಪ್ರಚಾರ ಸಭೆ ನಡೆಸಿದ ಅವರು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯೊಂದೇ ಮಹಾರಾಷ್ಟ್ರದ ವೇಗದ ಅಭಿವೃದ್ಧಿ ಭರವಸೆ ನೀಡುತ್ತದೆ ಎಂದರು.
ಮಹಾರಾಷ್ಟ್ರದ ಕುರಿತು ನನ್ನ ಬಾಂಧವ್ಯದ ಬಗ್ಗೆ ನಿಮಗೆಲ್ಲ ತಿಳಿಸಿದೆ. ಜನರನ್ನು ನಾವು ದೇವರ ಮತ್ತೊಂದು ಸ್ವರೂಪ ಎಂದು ಭಾವಿಸುತ್ತೇವೆ. ಆದರೆ, ಕೆಲವು ಜನರು ರಾಜಕೀಯ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಯಾವಾಗಲೇ ಮಹಾರಾಷ್ಟ್ರ ಜನರಿಗೆ ಏನಾದರೂ ಕೇಳಿದರೆ, ಅವರು ತುಂಬು ಹೃದಯದ ಆಶೀರ್ವಾದದಿಂದ ನೀಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಅಭಿವೃದ್ಧಿ ಕಂಡಿರುವ ಮಹಾರಾಷ್ಟ್ರದ ಬೆಳವಣಿಗೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ ಎಂಬ ಭರವಸೆಯನ್ನು ನೀಡುತ್ತೇನೆ. ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಿಂದ ಮಾತ್ರವೇ ಮಹಾರಾಷ್ಟ್ರಕ್ಕೆ ಬೇಕಾದ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಅವರು ಪ್ರತಿಪಾದನೆ ಮಾಡಿದ್ದಾರೆ.