ಮಹಾಕುಂಭ ನಗರ(ಉತ್ತರ ಪ್ರದೇಶ):ವಿವಿಧ ಅಖಾಡಾಗಳ ಸಂತರು ಮತ್ತು ನಾಗಾ ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಮಕರ ಸಂಕ್ರಾಂತಿ ದಿನದಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳದ 'ಅಮೃತ ಸ್ನಾನ' ಮಾಡಿ ಪುನೀತರಾಗಿದ್ದಾರೆ.
ಮಂಗಳವಾರ ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ ಸದಸ್ಯರು ಮೊದಲು 'ಅಮೃತ ಸ್ನಾನ' ಮಾಡಿದರು. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮಹಾಕುಂಭ ಮೇಳದ ಮೊದಲ ಅಮೃತ ಸ್ನಾನಕ್ಕಾಗಿ ನಿರಂಜನಿ ಅಖಾಡದ ಮೆರವಣಿಗೆಗೆ ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಚಾಲನೆ ನೀಡಿದರು.
ಸೋಮವಾರ 'ಪುಷ್ಯ ಪೂರ್ಣಿಮಾ' ದಿನದಂದು ಮೊದಲ 'ಸ್ನಾನ' ನಡೆದಿತ್ತು. ಮಹಾಕುಂಭ ಮೇಳದಲ್ಲಿ ವಿವಿಧ ಪಂಗಡಗಳ 13 ಅಖಾಡಗಳು ಭಾಗವಹಿಸುತ್ತವೆ. ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಗೆ ಒತ್ತು ನೀಡುವ ಮೂಲಕ ಹೆಸರುವಾಸಿಯಾಗಿರುವ ನಿರಂಜನಿ ಅಖಾಡಾ ಈ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಪ್ರಮುಖ ಅಖಾಡಾಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮ ಬಗ್ಗೆ ಒಲವು ಹೊಂದಿರುವವರಿಗೆ ಮಾರ್ಗದರ್ಶನ ನೀಡುತ್ತದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ಮೊದಲ ಅಮೃತ ಸ್ನಾನದ ದಿನದಂದು 3.50 ಕೋಟಿಗೂ ಹೆಚ್ಚು ಭಕ್ತರು, ಸಂತರು ಮತ್ತು ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೊದಲು ಅಮೃತ ಸ್ನಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸನಾತನ ಧರ್ಮ, ಮಹಾಕುಂಭಮೇಳದ ಆಡಳಿತ ಮಂಡಳಿ, ಸ್ಥಳೀಯ ಆಡಳಿತ, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು, ಅಂಬಿಗರು ಮತ್ತು ಎಲ್ಲ ಅಖಾಡಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು" ತಿಳಿಸಿದ್ದಾರೆ.