ಕರ್ನಾಟಕ

karnataka

ETV Bharat / bharat

ಕೆಲ ಯೂಟ್ಯೂಬ್​ ಚಾನೆಲ್​ಗಳಿಂದ ಸಮಾಜಕ್ಕೆ ಕಂಟಕ: ಮದ್ರಾಸ್ ಹೈಕೋರ್ಟ್ ಅಸಮಾಧಾನ - YOUTUBE CHANNELS - YOUTUBE CHANNELS

ಕೆಲ ಯೂಟ್ಯೂಬ್ ಚಾನೆಲ್​ಗಳು ಸಮಾಜಕ್ಕೆ ಕಂಟಕವಾಗುವಂತೆ ವರ್ತಿಸುತ್ತಿವೆ ಎಂದು ಮದ್ರಾಸ್ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ.

YouTube channels
YouTube channels ((image : ians))

By ETV Bharat Karnataka Team

Published : May 10, 2024, 1:50 PM IST

ಚೆನ್ನೈ: "ಕೆಲ ಯೂಟ್ಯೂಬ್ ಚಾನೆಲ್​​ಗಳು ತಮ್ಮ ಸಬ್​​ಸ್ಕ್ರೈಬರ್​ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅವಹೇಳನಕಾರಿ ಕಂಟೆಂಟ್​ಗಳನ್ನು ಪೋಸ್ಟ್​ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿವೆ. ಇಂಥವರ ವಿರುದ್ಧ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ" ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಮೌಖಿಕವಾಗಿ ಹೇಳಿದೆ.

ರೆಡ್ ಪಿಕ್ಸ್ ಯೂಟ್ಯೂಬ್ ಚಾನೆಲ್​ನ ಜಿ. ಫೆಲಿಕ್ಸ್ ಜೆರಾಲ್ಡ್ ಹಾಗೂ ಮತ್ತೊಬ್ಬ ಯೂಟ್ಯೂಬರ್ ಸಾವುಕ್ಕು ಶಂಕರ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆ, 1988 ರ ವಿವಿಧ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಿ. ಫೆಲಿಕ್ಸ್ ಜೆರಾಲ್ಡ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಕುಮರೇಶ್ ಬಾಬು ಅವರ ನ್ಯಾಯಪೀಠ ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

"ಅರ್ಜಿದಾರ ಜೆರಾಲ್ಡ್ ಅವರು ಸಾವುಕ್ಕು ಶಂಕರ್ ಅವರ ಸಂದರ್ಶನ ಮಾಡಿದ್ದರು ಮತ್ತು ಸಂದರ್ಶನದ ಸಮಯದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ವಿರುದ್ಧ ಮಾನಹಾನಿಕರವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು ಹಾಗೂ ಈ ಮೂಲಕ ಇಡೀ ಪೊಲೀಸ್ ಸಮುದಾಯಕ್ಕೆ ಅವಮಾನ ಉಂಟಾಗಿತ್ತು. ಹೀಗಾಗಿ ಇವರಿಬ್ಬರ ವಿರುದ್ಧ ಕೊಯಂಬತ್ತೂರು ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇ.ರಾಜ್ ತಿಲಕ್ ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದ ಮೊದಲ ಆರೋಪಿ ಶಂಕರ್​ ಅವರನ್ನು ಸೈಬರ್ ಕ್ರೈಂ ಪೊಲೀಸರು ಮೇ 4ರಂದು ಬಂಧಿಸಿದ್ದರು. ಜೆರಾಲ್ಡ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತಾದರೂ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿಲ್ಲ ಎಂದು ಎಪಿಪಿ ನ್ಯಾಯಾಲಯಕ್ಕೆ ತಿಳಿಸಿದರು.

ತನ್ನ ಕಕ್ಷಿದಾರನು ಕಳೆದ 25 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಜಿದಾರ ಜೆರಾಲ್ಡ್​ ಪರ ವಕೀಲರು ಹೇಳಿದರು. ಈ ಮಾತು ಕೇಳಿದಾಕ್ಷಣವೇ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಹಾಗಾದರೆ ಜೆರಾಲ್ಡ್ ಅವರನ್ನೇ ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಸೇರಿಸಬೇಕಾಗಿತ್ತು. ಏಕೆಂದರೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಲು ಅವರೇ ಸಂದರ್ಶನಾರ್ಥಿಯನ್ನು ಪ್ರೇರೇಪಿಸಿದ್ದಾರೆ ಎಂದು ಹೇಳಿದರು.

ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬ ಷರತ್ತಿನ ಮೇಲೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಬೇಕೇ ಎಂದು ನ್ಯಾಯಾಲಯವು ಎಪಿಪಿ ಅವರಿಗೆ ಕೇಳಿತು. ಹೀಗೆ ಮಾಡಿದಲ್ಲಿ ಇದು ಪರೋಕ್ಷವಾಗಿ ನಿರೀಕ್ಷಣಾ ಜಾಮೀನು ನೀಡಿದಂತಾಗುತ್ತದೆ ಎಂದು ಎಪಿಪಿ ಪ್ರತಿಕ್ರಿಯಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆಯನ್ನು ಒಂದು ವಾರ ಮುಂದೂಡಿದರು.

ಇದನ್ನೂ ಓದಿ : ಈ ಚುನಾವಣೆ ವೋಟ್ ಫಾರ್ ಜಿಹಾದ್ v/s ವೋಟ್ ಫಾರ್ ಡೆವಲಪ್‌ಮೆಂಟ್: ಅಮಿತ್ ಶಾ - Amit Shah

ABOUT THE AUTHOR

...view details