ಪುರಿ (ಒಡಿಶಾ): ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೊಸ ವಿವಾದ ಎಬ್ಬಿಸಿದ್ದಾರೆ. ಪ್ರಸಿದ್ಧ ಪುರಿ ಜಗನ್ನಾಥ ದೇವರು ಪ್ರಧಾನಿ ನರೇಂದ್ರ ಮೋದಿ ಅವರ ಎಂದು ಭಕ್ತ ಹೇಳುವ ಮೂಲಕ ಎಡವಟ್ಟು ಮಾಡಿದ್ದಾರೆ. ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿರುವ ಸಂಬಿತ್ ಪಾತ್ರಾ ಈ ಹೇಳಿಕೆ ಕುರಿತಂತೆ ಒಡಿಶಾದ ಆಡಳಿತಾರೂಢ ಬಿಜೆಡಿ ಮತ್ತು ಕಾಂಗ್ರೆಸ್ ಟೀಕಾಪ್ರಹಾರ ನಡೆಸಿವೆ.
ಒಡಿಶಾದ ಪುರಿಯಲ್ಲಿ ಸೋಮವಾರ ಪ್ರಧಾನಿ ಮೋದಿ ರೋಡ್‌ಶೋ ಹಮ್ಮಿಕೊಂಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಂಬಿತ್ ಪಾತ್ರಾ, ದೇವರು ಜಗನ್ನಾಥ ಸಹ ಮೋದಿಯ ಭಕ್ತ ಎಂದು ಹೇಳಿದ್ದಾರೆ. ಈ ಹೇಳಿಕೆಯು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸಂಬಿತ್ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ, ಉದ್ದೇಶಪೂರ್ವಕವಲ್ಲದ ತಪ್ಪು. ಈ ಮಾತಿನ ತಪ್ಪಿಗೆ ಮಹಾಪ್ರಭು ಜಗನ್ನಾಥರಲ್ಲಿ ಕ್ಷಮೆ ಕೇಳುತ್ತೇನೆ. ಇದಕ್ಕಾಗಿ ಮೂರು ದಿನ ಉಪವಾಸ ಆಚರಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಸಂಬಿತ್ ಪಾತ್ರಾ ಹೇಳಿಕೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಇದು ಒಡಿಯಾ ಅಸ್ಮಿತೆಗೆ ತುಂಬಾ ನೋವುಂಟು ಮಾಡಿದೆ. ಇದನ್ನು ಒಡಿಶಾದ ಜನರು ಬಹಳ ಸಮಯದಿಂದ ನೆನಪಿಸಿಕೊಳ್ಳುತ್ತಾರೆ ಮತ್ತು ಖಂಡಿಸುತ್ತಾರೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸಹ ಸಂಬಿತ್ ಪಾತ್ರಾ ಹೇಳಿಕೆ ಕುರಿತು ಖುದ್ದು ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.