ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು 45 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತು. ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ರೈ ಎದುರಿಸಲಿದ್ದಾರೆ.
ಇನ್ನುಳಿದಂತೆ, ಮಧ್ಯಪ್ರದೇಶದ ರಾಜ್‌ಗಢ ಕ್ಷೇತ್ರದಿಂದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ ಕ್ಷೇತ್ರದಿಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕ ಲಾಲ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಶಾಸಕ ವಿಕಾಸ್ ಠಾಕ್ರೆ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಎದುರಿಸಲಿದ್ದಾರೆ.
ಮಧ್ಯಪ್ರದೇಶದ 12, ಉತ್ತರ ಪ್ರದೇಶದ 9, ತಮಿಳುನಾಡಿನ 7, ಮಹಾರಾಷ್ಟ್ರದ 4, ಉತ್ತರಾಖಂಡ, ರಾಜಸ್ಥಾನ, ಮಣಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದ ತಲಾ ಎರಡು ಕ್ಷೇತ್ರಗಳು ಮತ್ತು ಪಶ್ಚಿಮ ಬಂಗಾಳ, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಿಜೋರಾಂ ಮತ್ತು ಛತ್ತೀಸ್ಗಢದ ತಲಾ ಒಂದು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿದೆ.
ಹನುಮಾನ್ ಬೇನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಕ್ಕೆ (ಆರ್‌ಎಲ್‌ಪಿ) ರಾಜಸ್ಥಾನದ ನಾಗೌರ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಮರುಭೂಮಿ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಲು ತವಕಿಸುತ್ತಿರುವ ಕಾರಣ ಆರ್ಎಲ್ಪಿಯೊಂದಿಗಿನ ಮೈತ್ರಿ ಮಹತ್ವದ್ದಾಗಿದೆ. ಅಲ್ಲಿ ಕಾಂಗ್ರೆಸ್ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪರ್ಧೆ ಹೇಗಿದೆ?:ಉತ್ತರ ಪ್ರದೇಶದಲ್ಲಿಜಾಟ್ ಸಮುದಾಯದ ಬೆಂಬಲವಿರುವ ಬೇನಿವಾಲ್ ಜೊತೆಗಿನ ಮೈತ್ರಿಯೊಂದಿಗೆ ತನ್ನ ಬೆಂಬಲ ವಿಸ್ತರಿಸಲು ಕೈ ಪಕ್ಷ ಎದುರು ನೋಡುತ್ತಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದು, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ವಾರಣಾಸಿಯಿಂದ ರಾಯ್, ಅಮ್ರೋಹಾದಿಂದ ಡ್ಯಾನಿಶ್ ಅಲಿ, ಸಹರಾನ್‌ಪುರದಿಂದ ಇಮ್ರಾನ್ ಮಸೂದ್ ಮತ್ತು ಕಾನ್ಪುರದಿಂದ ಅಲೋಕ್ ಮಿಶ್ರಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.