ಕರ್ನಾಟಕ

karnataka

ETV Bharat / bharat

ಲೋಕಸಭೆ ಚುನಾವಣೆ: ಮಣಿಪುರದ 11 ಬೂತ್​​ಗಳಲ್ಲಿ ನಾಳೆ ಮರು ಮತದಾನ - Repolling in Manipur

ಏಪ್ರಿಲ್​ 19ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಮಣಿಪುರದಲ್ಲಿ ಘರ್ಷಣೆಗಳು ಸಂಭವಿಸಿದ್ದವು. ಹೀಗಾಗಿ ಅಲ್ಲಿನ 11 ಮತಗಟ್ಟೆಗಳಲ್ಲಿ ಮರು ಮತದಾನ ಘೋಷಿಸಲಾಗಿದೆ.

ಮರು ಮತದಾನ
ಮರು ಮತದಾನ

By ETV Bharat Karnataka Team

Published : Apr 21, 2024, 12:57 PM IST

ಇಂಫಾಲ(ಮಣಿಪುರ):ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಂದು ಗುಂಡಿನ ದಾಳಿ, ಬೆದರಿಕೆ, ಇವಿಎಂಗಳನ್ನು ನಾಶಪಡಿಸಿದ ಮಣಿಪುರದ 11 ಮತಗಟ್ಟೆಗಳಲ್ಲಿ ಏಪ್ರಿಲ್​ 22ರಂದು (ನಾಳೆ) ಮರು ಮತದಾನ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ಏಪ್ರಿಲ್​ 19ರಂದು ನಡೆದ ಮತದಾನದಲ್ಲಿ ರಾಜ್ಯದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸಂಘರ್ಷ ಏರ್ಪಟ್ಟಿತ್ತು. ಇದರಿಂದಾಗಿ ಕೆಲವೆಡೆ ಶೂನ್ಯ ಮತದಾನವಾದರೆ, ಇನ್ನು ಕೆಲವೆಡೆ ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಂತಹ ಬೂತ್​ಗಳಲ್ಲಿ ನಡೆದ ಮತದಾನವನ್ನು ಅನೂರ್ಜಿತಗೊಳಿಸಿ ಹೊಸದಾಗಿ ಮತದಾನ ನಡೆಸಬೇಕು ಎಂದು ಆಯೋಗ ನಿರ್ದೇಶನ ನೀಡಿತ್ತು.

ಎಲ್ಲೆಲ್ಲಿ ಮರು ಮತದಾನ?:ಖುರೈ ಕ್ಷೇತ್ರದ ಮೊಯಿರಂಗ್ಯಾಂಪು ಸಾಜೆಬ್, ತೊಂಗಮ್ ಲೈಕೈ, ಕ್ಷೇತ್ರಗಾವೊದಲ್ಲಿನ ನಾಲ್ಕು, ಇಂಫಾಲ್ ಪೂರ್ವ ಜಿಲ್ಲೆಯ ತೊಂಗ್ಜುನಲ್ಲಿ ಒಂದು, ಉರಿಪೋಕ್‌ನಲ್ಲಿ ಮೂರು, ಇಂಫಾಲ್ ಪಶ್ಚಿಮ ಜಿಲ್ಲೆಯ ಕೊಂತೌಜಮ್‌ನಲ್ಲಿ ಒಂದು ಮತಗಟ್ಟೆಯಲ್ಲಿ ಮರು ಮತದಾನ ನಡೆಯಲಿದೆ.

ರಾಜ್ಯದ ಎರಡು ಲೋಕಸಭಾ ಕ್ಷೇತ್ರಗಳಾದ ಒಳ ಮಣಿಪುರ ಮತ್ತು ಹೊರ ಮಣಿಪುರದಲ್ಲಿ ಶೇಕಡಾ 72 ರಷ್ಟು ಮತದಾನವಾಗಿತ್ತು.

ಆಯೋಗಕ್ಕೆ ಕಾಂಗ್ರೆಸ್​ ದೂರು:ಇದಕ್ಕೂ ಮುನ್ನ, 47 ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಮರು ಮತದಾನಕ್ಕೆ ಒತ್ತಾಯಿಸಿತ್ತು.

ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಮಾತನಾಡಿ, "ಒಳ ಮಣಿಪುರ ಕ್ಷೇತ್ರದಲ್ಲಿ 36 ಮತ್ತು ಹೊರ ಮಣಿಪುರ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕು. ಬೂತ್​ಗಳನ್ನು ವಶಕ್ಕೆ ಪಡೆದು ಅಕ್ರಮವಾಗಿ ಮತ ಹಾಕಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ" ಎಂದು ತಿಳಿಸಿದ್ದಾರೆ.

ABOUT THE AUTHOR

...view details