ಜಲಂಧರ್ (ಪಂಜಾಬ್):ದೇಶದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇರಬಾರದು. ಜನರು ಸ್ವತಂತ್ರವಾಗಿ ಮತ ಚಲಾಯಿಸಿ ಎಂದು ಆಮ್ ಆದ್ಮಿ ಪಕ್ಷದ ಪಂಜಾಬ್ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೋರಿದರು. ಏಳನೇ ಮತ್ತು ಕೊನೆಯ ಹಂತದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿದ ಬಳಿಕ ಅವರು ಇಲ್ಲಿ ಮಾತನಾಡಿದರು.
ಜಲಂಧರ್ನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಒತ್ತಾಯಿಸಿದ ಅವರು, ನಮ್ಮ ನೆಚ್ಚ್ಚಿನ ಸರ್ಕಾರವನ್ನು ಆಯ್ಕೆ ಮಾಡಲು ಇರುವ ಹಾದಿ ಅಂದರೆ ಅದು ಮತದಾನ. ದೇಶದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇರಬಾರದು. ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಎಲ್ಲರಿಗೂ ಸಮಾನ ಅಧಿಕಾರ ಇದೆ ಎಂದು ಅವರು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಜಲಂಧರ್ನಲ್ಲಿ ಗರಿಷ್ಠ ಮತದಾನವಾಗಬೇಕು ಎಂಬುದು ನನ್ನ ನಿರೀಕ್ಷೆ. ಮತ ಹಾಕುವುದು ನಮ್ಮ ಕರ್ತವ್ಯ ಕೂಡ ಹೌದು ಎಂದು ಹೇಳಿದರು.
ಹರ್ಭಜನ್ ಸಿಂಗ್ ಭಾರತೀಯ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾಗಿದ್ದಾರೆ. 2021 ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದರು. ಭಾರತ ತಂಡದ ಪರವಾಗಿ ಅವರು 103 ಟೆಸ್ಟ್ಗಳನ್ನು ಆಡಿದ್ದು, ಅದರಲ್ಲಿ 417 ವಿಕೆಟ್ ಪಡೆದಿದ್ದಾರೆ. 236 ಏಕದಿನ ಪಂದ್ಯಗಳಲ್ಲಿ 269 ಮತ್ತು 19 ಟಿ20ಪಂದ್ಯಗಳಲ್ಲಿ 18 ವಿಕೆಟ್ಗಳನ್ನು ಉದುರಿಸಿದ್ದಾರೆ. ಇನ್ನೂ ಐಪಿಎಲ್ನಲ್ಲಿ ಭಜ್ಜಿ ವಿವಿಧ ಫ್ರಾಂಚೈಸಿಗಳ ಪರವಾಗಿ 163 ಪಂದ್ಯಗಳನ್ನು ಆಡಿದ್ದು ಅದರಲ್ಲಿ 150 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ 'ದೂಸ್ರಾ' ಅಸ್ತ್ರದ ಮೂಲಕವೇ ಬ್ಯಾಟರ್ಗಳ ನಿದ್ದೆಗೆಡಿಸಿದ್ದರು.