ಹೈದರಾಬಾದ್:ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ದಿನವೇ ಬಾಲಿವುಡ್ ಹಿರಿಯ ನಟ ಶೇಖರ್ ಸುಮನ್ ಮತ್ತು ಕಾಂಗ್ರೆಸ್ನ ರಾಷ್ಟ್ರೀಯ ಮಾಧ್ಯಮದ ಮಾಜಿ ಸಂಯೋಜಕಿ ರಾಧಿಕಾ ಖೇರಾ ಅವರು ಬಿಜೆಪಿ ಸೇರ್ಪಡೆಯಾದರು.
ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟ ಶೇಖರ್ ಸುಮನ್ ಮತ್ತು ಈಚೆಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ರಾಧಿಕಾ ಖೇರಾ ಅವರನ್ನು ಪಕ್ಷದ ಹಿರಿಯ ನಾಯಕ ವಿನೋದ್ ತಾವ್ಡೆ ಅವರು ಸ್ವಾಗತಿಸಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಾನು ನಿನ್ನೆಯವರೆಗೂ ಬಿಜೆಪಿ ಸೇರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಜೀವನದಲ್ಲಿ ಅನೇಕ ವಿಷಯಗಳು ತಿಳಿದೋ ಅಥವಾ ತಿಳಿಯದೆಯೋ ಸಂಭವಿಸುತ್ತವೆ. ಈಗ ಬಿಜೆಪಿ ಸೇರಿದ್ದೇನೆ. ಇದು ದೇವರ ಆದೇಶ ಇತ್ತು ಎಂದೆನಿಸುತ್ತದೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದರು.