ನವದೆಹಲಿ :ಅಂದು ರಸ್ತೆ ಬದಿಯಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ಇಂದು ಫೈವ್ ಸ್ಟಾರ್ ಹೋಟೆಲ್ ಶ್ಯಾಂಗ್ರಿಲಾದಲ್ಲಿ ಟೀ ಕನ್ಸಲ್ಟಂಟ್ ಆಗಿದ್ದಾರೆ. ಇದು ಲಕ್ಷ್ಮಣ್ ರಾವ್ ಅವರ ಯಶಸ್ಸಿನ ಕಥೆ. 40ನೇ ವಯಸ್ಸಿಗೆ 12ನೇ ತರಗತಿ ಪಾಸ್ ಮಾಡಿ, 50ಕ್ಕೆ ಬಿಎ ಪದವಿ ಪಡೆದು 63ನೇ ವಯಸ್ಸಿಗೆ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದಿರುವುದು ಅವರ ಮತ್ತೊಂದು ಸಾಧನೆ. ಈ ಮೂಲಕ ಜೀನದ ಹೋರಾಟದಲ್ಲಿ ಶಿಕ್ಷಣದಲ್ಲಿ ಗೆಲುವು ಸಾಧಿಸಿ, ಜಗತ್ತಿಗೆ ಸ್ಪೂರ್ತಿಯಾಗಿದ್ದಾರೆ.
ಕನಸುಗಳಿಗಾಗಿ ಹೋರಾಟ : ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸಣ್ಣ ಗ್ರಾಮದಲ್ಲಿ 1952ರಲ್ಲಿ ಕಡುಬಡತನದ ಕುಟುಂಬದಲ್ಲಿ ಲಕ್ಷಣ ರಾವ್ ಜನಿಸಿದರು. 10ನೇ ತರಗತಿ ಬಳಿಕ ಕುಟುಂಬದ ಜವಾಬ್ದಾರಿ ನಿರ್ವಹಣೆಗೆ ಓದು ಅರ್ಧಕ್ಕೆ ನಿಲ್ಲಿಸಿ, ಅಮರಾವತಿಯ ಗಿರಣಿಯಲ್ಲಿ ಕೆಲಸಕ್ಕೆ ಸೇರಿದರು. 1975ರಲ್ಲಿ ದೆಹಲಿಗೆ ಬಂದ ಇವರು ಮೊದಲು ಹೋಟೆಲ್ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದರು. ಇದಾದ ಬಳಿಕ ಐಟಿಒದಲ್ಲಿನ ವಿಷ್ಣು ದಿಗಂಬರ್ ಮಾರ್ಗ್ನಲ್ಲಿ ಪಾನ್ ಮತ್ತು ಟೀ ಶಾಪ್ ತೆರೆದರು.
ಫುಟ್ಪಾತ್ನಿಂದ ಫೈಸ್ಟಾರ್ ಹೋಟೆಲ್ವರೆಗೆ: ಟೀ ಮಾರಾಟ ಮಾಡುತ್ತಲೇ ಲಕ್ಷಣ್ ರಾವ್ ಅಧ್ಯಯನ ಮುಂದುವರೆಸಿದರು. ಅವರ ಒಂದು ಲೇಖನವು ಹಾಂಗ್ ಕಾಂಗ್ನಲ್ಲೂ ಪ್ರಕಟವಾಗಿದೆ. ಇದನ್ನು ಓದಿ ಪ್ರೇರಣೆಗೊಂಡ ಶ್ಯಾಂಗ್ರಿಲಾ ಹೋಟೆಲ್ ಉಪಾಧ್ಯಕ್ಷರು ದೆಹಲಿಯಲ್ಲಿ ಇವರನ್ನು ಭೇಟಿಯಾಗಲು ಅಧಿಕಾರಿಗಳನ್ನು ಕಳುಹಿಸಿದ್ದರು. ಆರಂಭದಲ್ಲಿ ಲಕ್ಷ್ಮಣ್ ರಾವ್ಗೆ ಉದ್ಯೋಗದ ಆಫರ್ ನೀಡಿದಾಗ ಅವರು ಅದನ್ನು ನಿರಾಕರಿಸಿದರು. ಹೀಗೆ ಮೂರು ಬಾರಿ ನಿರಾಕರಣೆ ಬಳಿಕ ನಾಲ್ಕನೇ ಬಾರಿ ಕೆಲಸಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರ ಪರಿಣಾಮವಾಗಿ ಶ್ಯಾಂಗ್ರಿಲಾ ಹೋಟೆಲ್ನಲ್ಲಿ ಟೀ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದು, ಅವರಿಗೆ ಗೌರವವನ್ನು ನೀಡಲಾಗುತ್ತಿದೆ.
ಉನ್ನತ ಸ್ಥಾನಕ್ಕೇರಿಸಿದ ಶಿಕ್ಷಣ: ಶಿಕ್ಷಣವೂ ಸ್ವಾಭಿಮಾನ, ಗೌರವ ಮತ್ತು ಗುರುತನ್ನು ನೀಡಿದೆ. 40ನೇ ವಯಸ್ಸಿನಲ್ಲಿ ನಾನು ಓದಲು ಶುರು ಮಾಡದಿದ್ದರೆ, ಇಂದು ಫೈವ್ ಸ್ಟಾರ್ ಹೋಟೆಲ್ನಲ್ಲಿ ಇರುತ್ತಿರಲಿಲ್ಲ. ಓದಿಗೆ ವಯಸ್ಸಿನ ಅಡ್ಡಿ ಇರುವುದಿಲ್ಲ. ಜೀವನದಲ್ಲಿ ಮುಂದೆ ಸಾಗಲು ಶಿಕ್ಷಣವನ್ನು ಅಪ್ಪಿಕೊಳ್ಳಬೇಕು. ಅದು ನಿಮ್ಮನ್ನು ಜಗತ್ತಿನಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದಿದ್ದಾರೆ.