ಅಯೋಧ್ಯೆ (ಉತ್ತರಪ್ರದೇಶ) :ಅಯೋಧ್ಯೆ ಭವ್ಯ ರಾಮಮಂದಿರದಲ್ಲಿ ವಿರಾಜಮಾನವಾಗಿರುವ ಪ್ರಭು ಶ್ರೀರಾಮನ ದರ್ಶನ ಭಕ್ತರಿಗೆ ಇಂದಿನಿಂದ ಮುಕ್ತವಾಗಿದೆ. ಬಾಲರಾಮನ ಕಾಣಲು ಭಕ್ತರು ಮುಗಿಬಿದ್ದಿದ್ದಾರೆ. ಭಾರೀ ಸಂಖ್ಯೆಯ ಜನರು ಏಕಕಾಲಕ್ಕೆ ಬಂದಿರುವ ಕಾರಣ ದಟ್ಟಣೆ ಉಂಟಾಗಿದೆ. ಮೊದಲ ದಿನವೇ 2 ರಿಂದ 3 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಅಯೋಧ್ಯೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ.
ರಾಮನ ಕಾಣಲು ಬಂದ ಭಕ್ತರಿಗೆ ಎರಡು ಹಂತದಲ್ಲಿ ದರ್ಶನಾವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ ಬೆಳಗ್ಗೆ 7 ರಿಂದ ದೇವಸ್ಥಾನದ ದ್ವಾರ ತೆರೆಯಲಾಗಿತ್ತು. ಪುರುಷೋತ್ತಮನ ಕಾಣಲು ಭಕ್ತರು ನಸುಕಿನ ಜಾವ 3 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಎಲ್ಲಿ ನೋಡಿದರಲ್ಲಿ ರಾಮ ನಾಮಾವಳಿ ಕೇಳಿಬರುತ್ತಿತ್ತು. ಸಾವಿರಾರು ಭಕ್ತರು ದರ್ಶನ ಪಡೆದ ಬಳಿಕ 11.30 ಕ್ಕೆ ದೇಗುಲದ ಬಾಗಿಲು ಹಾಕಲಾಯಿತು. ಇದಾದ ಬಳಿಕ 2 ಗಂಟೆಯಿಂದ ಎರಡನೇ ಹಂತದ ದರ್ಶನಾವಕಾಶ ನೀಡಲಾಗಿದೆ. ಸಾವಿರ ಸಂಖ್ಯೆಯಲ್ಲಿ ಕಾದಿರುವ ಭಕ್ತರು ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ದೇವರ ದರ್ಶನದ ಸಮಯ:ಜನವರಿ 22 ರಂದು ಪ್ರಾಣಪ್ರತಿಷ್ಠಾಪನಾ ಕಾರ್ಯ ಅದ್ಧೂರಿಯಾಗಿ ಜರುಗಿತು. ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪಾರ್ಚನೆ, ಆರತಿ ಬೆಳಗುವ ಮೂಲಕ ಸುಂದರ ಬಾಲರಾಮನ ಅನಾವರಣ ಮಾಡಿದರು. ಭಕ್ತರಿಗೆ ತೆರೆದುಕೊಂಡಿರುವ ದೇವಸ್ಥಾನದಲ್ಲಿ 2 ಹಂತದಲ್ಲಿ ದರ್ಶನಾವಕಾಶ ನೀಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ 11.30 ರವರೆಗೆ ಮೊದಲ ದರ್ಶನ ಸಿಕ್ಕರೆ, ಮಧ್ಯಾಹ್ನ 2 ರಿಂದ ಸಂಜೆ 7 ಗಂಟೆವರೆಗೆ ಎರಡನೇ ಹಂತದ ದರ್ಶನ ಇರಲಿದೆ.