ಕೊಚ್ಚಿ(ಕೇರಳ):ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಕುರುವ ಗ್ಯಾಂಗ್ನ ದರೋಡೆಕೋರನನ್ನು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸಂತೋಷ್ ಸೆಲ್ವಂ ಬಂಧಿತ.
ನಿನ್ನೆ (ಶನಿವಾರ) ಕುಂದನೂರು ಮೇಲ್ಸೇತುವೆ ಬಳಿ ಮನ್ನಂಚೇರಿ ಪೊಲೀಸರು ಸಂತೋಷ್ ಸೆಲ್ವಂ ಸೇರಿದಂತೆ ಕುರುವ ಗ್ಯಾಂಗ್ನ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಸಂತೋಷ್ನ ತಾಯಿ, ಪತ್ನಿ ಸೇರಿದಂತೆ ಗ್ಯಾಂಗ್ನ ಮಹಿಳೆಯರು ಪೊಲೀಸರನ್ನು ತಡೆದು ವಾಗ್ವಾದಕ್ಕಿಳಿದ್ದಾರೆ. ಇದರ ಲಾಭ ಪಡೆದ ಸಂತೋಷ್ ಸೆಲ್ವಂ ಕೈಕೋಳದೊಂದಿಗೆ ಪರಾರಿಯಾಗಿದ್ದ. ಪೊಲೀಸರು ಉಳಿದ ಇಬ್ಬರು ಆರೋಪಿಗಳನ್ನು ಮರಡು ಠಾಣೆಗೆ ರವಾನಿಸಿದ್ದರು.
ನಂತರ ಪೊಲೀಸರು ಆರೋಪಿಯ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಆರೋಪಿ ಜವುಗು ಪ್ರದೇಶದಲ್ಲಿ ಅಡಗಿರುವುದು ಗೊತ್ತಾಗಿದೆ. ನಂತರ ಮನ್ನಂಚೇರಿ ಪೊಲೀಸರು ಕೊಚ್ಚಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ 75ಕ್ಕೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಲಪ್ಪುಳ ಡಿವೈಎಸ್ಪಿ ಎಂ. ಆರ್. ಮಧು ಬಾಬು ಮತ್ತು ಎರ್ನಾಕುಲಂ ಎಸಿಪಿ ಪಿ. ರಾಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಗಾಗಿ ಅಲಪ್ಪುಳಕ್ಕೆ ಕರೆದೊಯ್ಯಲಾಗಿದೆ.