ವಾರಾಣಸಿ, ಉತ್ತರಪ್ರದೇಶ: 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯನ್ನು ಕೊಲೆ ಮಾಡಿದ ಆರೋಪಿ ಇರ್ಷಾದ್ನ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು.
ಆದರೆ, ಆತ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಅವನನ್ನು ಬಂಧಿಸಿದ್ದಾರೆ. ಆರೋಪಿ ಇರ್ಷಾದ್ ನ ಬಲಗಾಲಿಗೆ ಗುಂಡು ತಗುಲಿದೆ ಎಂದು ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ ವಾಲ್ ತಿಳಿಸಿದ್ದಾರೆ. ಸಿಸಿಟಿವಿ ಮತ್ತು ಕಣ್ಗಾವಲು ಸಹಾಯದಿಂದ ಆರೋಪಿಯನ್ನು ಗುರುತಿಸಲಾಗಿದೆ.
ಡಿಸಿಪಿ ಪ್ರಕಾರ, ಬುಧವಾರ ರಾಮನಗರ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಬಾಲಕಿ (8) ಸಾಮಾನು ಖರೀದಿಸಲು ಅಂಗಡಿಗೆ ಹೋಗಿದ್ದಳು. ಈ ವೇಳೆ, ಆರೋಪಿ ಇರ್ಷಾದ್ ಆಕೆಯನ್ನು ಅಪಹರಿಸಿದ್ದ. ಇದಾದ ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ನಂತರ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಇರ್ಷಾದ್ ಬಾಲಕಿಯನ್ನು ಕರೆದೊಯ್ಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿದೆ. ಕುಟುಂಬಸ್ಥರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಠಾಣೆ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಬಾಲಕಿಯ ಶವವನ್ನು ವಶಪಡಿಸಿಕೊಂಡ ನಂತರ ಎಸ್ಒಜಿ ಮತ್ತು ಪೊಲೀಸ್ ತಂಡಗಳು ಆರೋಪಿಗಾಗಿ ನಿರಂತರವಾಗಿ ಶೋಧ ನಡೆಸುತ್ತಿದ್ದವು ಎಂದು ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ ವಾಲ್ ಹೇಳಿದ್ದಾರೆ. ಏತನ್ಮಧ್ಯೆ, ಸುಜಾಬಾದ್ ಪ್ರದೇಶದಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಆದರೆ, ಆತನನ್ನು ಬಂಧಿಸಲು ಅಲ್ಲಿಗೆ ತೆರಳಿದಾಗ ಇರ್ಷಾದ್ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ. ಪ್ರತೀಕಾರದ ದಾಳಿಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ : ಸಂಭಾಲ್ನಲ್ಲಿ 'ಮೃತ್ಯು ಕೂಪ್' ಪತ್ತೆ: ಇದು ಬ್ರಹ್ಮದೇವ ಸೃಷ್ಟಿಸಿದ ಬಾವಿ ಎಂದ ಸ್ಥಳೀಯರು - MRITYU KOOP FOUND IN SAMBHAL