ನವದೆಹಲಿ:ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಸಿಐಎಸ್‌ಎಫ್ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರು ಇನ್ನೂ ಅಮಾನತಿನಲ್ಲಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಸಿಐಎಸ್‌ಎಫ್ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿನ ಮೀಸಲು ಬೆಟಾಲಿಯನ್ಗೆ ವರ್ಗಾವಣೆ ಮಾಡಿ, ಹೊಸ ಹುದ್ದೆಗೆ ಮರುನೇಮಕ ಮಾಡಲಾಗಿದೆ ಎನ್ನುವ ವರದಿಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದು ಸುಳ್ಳು ಸುದ್ದಿ ಎನ್ನುವುದನ್ನು ಸ್ವತಃ ಸಿಐಎಸ್ಎಸ್ಎಫ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.
ನಡೆದಿದ್ದೇನು?: ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಜೂನ್ 6ರಂದು ನಟಿ ಕಂಗನಾ ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದರು. ಆಗ ಅಲ್ಲಿ ಕರ್ತವ್ಯ ನಿರತ ಸಿಐಎಸ್‌ಎಫ್ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರು ಬಿಜೆಪಿ ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ನಟಿಗೆ ಕಪಾಳಮೋಕ್ಷ ಮಾಡಿದ ಬೆನ್ನಲ್ಲೇ, "ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಆಂದೋಲನದ ಸಮಯದಲ್ಲಿ ಪಂಜಾಬ್ ಮಹಿಳೆಯರ ಬಗ್ಗೆ ಕಂಗನಾ '100 ರೂಪಾಯಿ ಪಡೆದು ರೈತರ ಚಳವಳಿಯಲ್ಲಿ ಭಾಗವಹಿಸಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಆ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಇದ್ದಳು. ಅವರ ಹೇಳಿಕೆ ನನ್ನಲ್ಲಿ ಕೋಪ ತಂದಿತ್ತು" ಎಂದು ಕೌರ್ ಸ್ಪಷ್ಟೀಕರಣ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.