ಬಳ್ಳಾರಿ: ಸಿದ್ದರಾಮಯ್ಯ ಕ್ರಿಶ್ಚಿಯನ್, ಮುಸ್ಲಿಮರನ್ನು ಓಲೈಸುತ್ತಾರೆ, ಹಿಂದೂಗಳನ್ನು ವಿರೋಧಿಸುತ್ತಾರೆ ಎಂದು ಹೇಳುತ್ತಾರೆ. ಆದರೆ ನಾನು ಯಾರನ್ನೂ ವಿರೋಧಿಸಲ್ಲ. ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಳ್ಳಾರಿಯ ಕ್ರೈಸ್ತ ಧರ್ಮ ಕ್ಷೇತ್ರದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬಳ್ಳಾರಿ ಧರ್ಮ ಕ್ಷೇತ್ರದ ಮಹೋತ್ಸವ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸಿದ್ದೇನೆ. ಭಾರತ ದೇಶ ಬಹುತ್ವದ ದೇಶ. ಎಲ್ಲಾ ಜಾತಿ ಧರ್ಮ ಭಾಷೆಯ ಜನರು ಇಲ್ಲಿ ಇದ್ದಾರೆ. ನಾವು ಮೂಲತಃ ಮನುಷ್ಯರು, ಹಾಗಾಗಿ ಸರ್ವಧರ್ಮ ಸಮನ್ವಯ ಪರಂಪರೆಯನ್ನು ನಾವೆಲ್ಲ ಉಳಿಸಿಕೊಂಡು ಹೋಗಬೇಕು. ಕುವೆಂಪು ಅವರು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿ, ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆ. ನಾವು ಪರಸ್ಪರ ಪ್ರೀತಿಸಬೇಕು. ಬೇರೆ ಧರ್ಮಗಳನ್ನು ದ್ವೇಷಿಸಬಾರದು. ಬಸವಾದಿ ಶರಣರು ಕೂಡ ಧಯವೇ ಧರ್ಮದ ಮೂಲವಯ್ಯ ಎಂದೇ ಹೇಳಿದ್ದಾರೆ" ಎಂದರು.
"ಧರ್ಮಕ್ಕೆ ಬೇರೆ ಅರ್ಥ ಹುಡುಕಬಾರದು. ಒಬ್ಬರನ್ನು ದಯೆಯಿಂದ ನೋಡಬೇಕು. ದ್ವೇಷ ಅಸೂಯೆ ನಮ್ಮ ಮಧ್ಯೆ ಇರಬಾರದು. ದ್ವೇಷ ಅಸೂಯೆಯಿಂದ ಸಮಾಜ ಒಡೆದು ಹೋಗುತ್ತದೆ. ನಿಮ್ಮ ಧರ್ಮವನ್ನು ಪ್ರೀತಿಯಿಂದ ಕಂಡರೆ, ಬೇರೆ ಧರ್ಮವನ್ನು ಸಹಿಷ್ಣುತೆಯಿಂದ ಕಾಣಬೇಕು. ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕು ಎಂದು ಕುವೆಂಪು ಹೇಳಿದ್ದಾರೆ. ಆದರೆ ನಾವು ನೂರಾರು ಜಾತಿಗಳನ್ನು ಮಾಡಿ ಅಸಮಾನತೆಗೆ ಕಾರಣವಾಗಿದ್ದೇವೆ" ಎಂದು ಸಿಎಂ ಅಭಿಪ್ರಾಯಪಟ್ಟರು.
"ಒಂದು ವೇಳೆ ನಾನು ಓದದೇ ಇರುತ್ತಿದ್ದರೆ ಸಿಎಂ ಆಗುತ್ತಿರಲಿಲ್ಲ. ಅಂಬೇಡ್ಕರ್ ಈ ದೇಶಕ್ಕೆ ಸಂವಿಧಾನ ಕೊಡದಿದ್ರೆ ನಾನು ಸಿಎಂ ಆಗುತ್ತಿರಲಿಲ್ಲ. ನಾವೆಲ್ಲರೂ ಸಮಾನತೆಯಿಂದ ಬದುಕಲು ಕಲಿಯಬೇಕು. ಮನುಷ್ಯ ಧರ್ಮವನ್ನು ಎಲ್ಲರೂ ಪ್ರೀತಿಸಬೇಕು. ವಚನಗಳು ಹೇಳಿ ನಂತರ ಕೆಲವರು ನೀವು ಯಾವ ಜಾತಿ ಅಂತಾ ಕೇಳ್ತಾರೆ. ಜ್ಞಾನ ವಿಕಸನ ಮಾಡುವುದೇ ಶಿಕ್ಷಣ. ಕ್ರಿಶ್ಚಿಯನ್ ಮಿಷನರಿಗಳು ಶಿಕ್ಷಣ ಕೊಡುವ ಕೆಲಸ ಮಾಡುತ್ತಿವೆ. ಎಲ್ಲಾ ಜಾತಿ ಧರ್ಮದವರಿಗೆ ಕ್ರಿಶ್ಚಿಯನ್ ಮಿಷನರಿಗಳು ಶಿಕ್ಷಣ ಕೊಡುತ್ತಿವೆ" ಎಂದು ತಿಳಿಸಿದರು.
"ಸಮಾಜವನ್ನು ಒಡೆಯುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬರು ಧರ್ಮಾತೀತವಾಗಿ ಇರಬೇಕು. ನಾವೆಲ್ಲರೂ ಜಾತ್ಯತೀತವಾದಿಗಳು. ಪ್ರತಿಯೊಂದು ಸರ್ಕಾರ, ರಾಜಕೀಯ ಪಕ್ಷಗಳು ಕೂಡ ಸಂವಿಧಾನದ ಅಶಯವನ್ನು ಈಡೇರಿಸಬೇಕು. ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಗ್ಯಾರೆಂಟಿ ಯೋಜನೆ ತಂದಿದ್ದೇವೆ. ಆದರೆ ಇದಕ್ಕೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ಒಬ್ಬ ವ್ಯಕ್ತಿಗೆ 5-6 ಸಾವಿರ ಕೊಡುತ್ತಿದ್ದೇವೆ. ಹೆಣ್ಣುಮಕ್ಕಳು ಶಿಕ್ಷಣ ಪಡೆದು, ಆರ್ಥಿಕವಾಗಿ ಸಬಲವಾದರೆ ಯಾರಾದರೂ ಮದುವೆ ಆಗುತ್ತಾರೆ. ಜಾತಿ ವ್ಯವಸ್ಥೆ ಹೋಗಬೇಕು. ಕ್ರೈಸ್ತ ಧರ್ಮದವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ" ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬುಡಕಟ್ಟು ಜನರ ಮೂಲಸೌಕರ್ಯ ಸಂಬಂಧ ಸೂಚನೆಗಳು ಜಾರಿಯಾಗದೇ ಇದ್ದರೆ ಶಿಸ್ತು ಕ್ರಮ: ಸಿಎಂ ಸಿದ್ದರಾಮಯ್ಯ