ಕೃಷ್ಣಗಿರಿ(ತಮಿಳುನಾಡು): ವೀರಪ್ಪನ್ ಹಿರಿಯ ಪುತ್ರಿ ವಿದ್ಯಾರಾಣಿ ವೀರಪ್ಪನ್ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ನಾಮ್ ತಮಿಳರ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ವಿದ್ಯಾರಾಣಿ, 'ಈಟಿವಿ ಭಾರತ್'ಗೆ ಸಂದರ್ಶನ ನೀಡಿದರು.
ಪ್ರಶ್ನೆ: ನಿಮ್ಮ ಚುನಾವಣಾ ಪ್ರಚಾರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?
ಉತ್ತರ: ಪ್ರಚಾರಕ್ಕೆ ಹೋದಾಗ ಜನ ನನ್ನನ್ನು ಸ್ವಂತ ಮಗಳಂತೆ ನೋಡುತ್ತಾರೆ. ತಂದೆ ಇಲ್ಲದಿರುವುದರಿಂದ ಜನರು ನನ್ನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಈ ಚುನಾವಣೆ ನನಗೆ ತುಂಬಾ ಅನುಕೂಲಕರವಾಗಿದೆ. ರಾಜಕೀಯವನ್ನು ಮೀರಿ ಜನರು ನನ್ನನ್ನು ಭಾವನಾತ್ಮಕವಾಗಿ ಮಗಳಾಗಿ ನೋಡುತ್ತಿದ್ದಾರೆ.
ಪ್ರಶ್ನೆ: ರಾಜಕೀಯ ಪ್ರವೇಶಿಸಿರುವ ನಿಮಗೆ ತಾಯಿ ಮತ್ತು ಸಹೋದರಿಯ ಬೆಂಬಲವಿದೆಯೇ?
ಉತ್ತರ: ಖಂಡಿತವಾಗಿಯೂ ನನ್ನನ್ನು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಅವರೂ ತಮಿಳು ರಾಷ್ಟ್ರೀಯತೆಯ ತತ್ವದಡಿಯಲ್ಲಿ ಬದುಕುತ್ತಿದ್ದಾರೆ.
ಪ್ರಶ್ನೆ:ಇತ್ತೀಚೆಗಷ್ಟೇ ವೀರಪ್ಪನ್ ಜೀವನ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ಇದು ಅವರ ಹಲವು ಮುಖಗಳನ್ನು ಅನಾವರಣಗೊಳಿಸಿತು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ: ತಂದೆ ವೀರಪ್ಪನ್ ಆ ದಿನಗಳಲ್ಲಿ ಕೆಲವು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದರು. ಆಗ ಹೇಳಿದ್ದನ್ನು ಇಂದಿನ ಜನರು ಅರ್ಥಮಾಡಿಕೊಳ್ಳಲು ದೇವರು ಸಾಧ್ಯವಾಗಿಸಿದ್ದಾನೆ. ತಂದೆಯ ವಿವಿಧ ಮುಖಗಳನ್ನು ಅನೇಕ ಜನರು ಕಂಡಿದ್ದಾರೆ. ಅವರನ್ನು ಒಂದು ಕಡೆಯಿಂದ ಕ್ರಿಮಿನಲ್ ಆಗಿ, ಮತ್ತೊಂದು ಕಡೆಯಿಂದ ನಾಯಕನಂತೆ ಕಾಣುತ್ತಿದ್ದರು. ಆದರೆ ಇಂದು ಅವರು ಮಾಡಿದ ಪ್ರತಿಯೊಂದು ಕಾರ್ಯದ ಹಿಂದೆ ಒಂದು ಪ್ರಮುಖ ಕಾರಣವಿತ್ತೆಂಬುದು ಒಳ್ಳೆಯ ವಿಷಯ. ಅವರ ಯಾವುದೇ ಅಪರಾಧ ಕೃತ್ಯವನ್ನು ನಾನು ಸಮರ್ಥಿಸಿಕೊಳ್ಳಲಾರೆ.
ಪ್ರಶ್ನೆ:ನಿಮ್ಮ ಗೆಲ್ಲುವಿಗಿರುವ ಸಾಧ್ಯತೆಗಳೇನು?
ಉತ್ತರ: ಕ್ಷೇತ್ರದ ಪ್ರತಿಯೊಬ್ಬರೂ ನನಗೆ ಬೆಂಬಲ ನೀಡುತ್ತಿದ್ದು, ಮತ ಹಾಕಲು ಉತ್ಸುಕರಾಗಿದ್ದಾರೆ.
ಪ್ರಶ್ನೆ:ನೀವು ಕೆಲವು ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದೀರಿ, ನಂತರ ಪಕ್ಷ ತೊರೆಯಲು ಕಾರಣ?
ಉತ್ತರ: ಬಿಜೆಪಿ ರಾಷ್ಟ್ರೀಯ ಪಕ್ಷ, ಜನರಿಗೆ ಏನಾದರೂ ಒಳ್ಳೆಯದು ಮಾಡಬಹುದು ಎಂಬ ಭರವಸೆಯಿಂದ ನಾನು ಅಲ್ಲಿಗೆ ಹೋಗಿದ್ದೆ. ಸುಮಾರು ಒಂದೂವರೆ ವರ್ಷಗಳ ಕಾಲ ಚೆನ್ನಾಗಿತ್ತು. ನಂತರ ನಾನು ರಾಜಕಾರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಹಾಗಾಗಿ ನಾನು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೆ. ಈ ಬಾರಿ ಕೊನೆಯ ಕ್ಷಣದಲ್ಲಿ ಬಿಜೆಪಿ ಕೂಡ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ನೀಡಿತು. ಆದರೆ ಆ ಪಕ್ಷದ ನೀತಿಗಳು ಇಷ್ಟವಾಗದ ಕಾರಣ ಬಿಜೆಪಿ ತೊರೆದು ನಾಮ್ ತಮಿಳರ್ ಪಕ್ಷಕ್ಕೆ ಸೇರಿಕೊಂಡೆ.
ಪ್ರಶ್ನೆ:ನೀವು ರಾಜಕೀಯದಿಂದಾಗಿ ಬಿಜೆಪಿ ತೊರೆದಿದ್ದೀರಿ ಎಂದು ಹೇಳುತ್ತೀರಿ. ನಾಮ್ ತಮಿಳರ್ ಪಕ್ಷದ ಯಾವ ನೀತಿ ನಿಮ್ಮನ್ನು ಆಕರ್ಷಿಸಿತು?
ಉತ್ತರ: ನಾವು ಮುಂದಿನ ಪೀಳಿಗೆಯನ್ನು ಉಳಿಸಲು ಬಯಸಿದರೆ, ಮರ-ಗಿಡ, ಮಣ್ಣು, ಭೂಮಿ ಮತ್ತು ನೀರಿ ಸೇರಿ ಪ್ರಕೃತಿಯನ್ನು ರಕ್ಷಿಸಬೇಕು. ಅದನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡಬೇಕು. ಮುಂದಿನ ಪೀಳಿಗೆಗೆ ನಾವು ಕಲಿಸಬೇಕಾದ ಪ್ರಕೃತಿಯನ್ನು ಪ್ರೀತಿಸುವ ತತ್ವಗಳು ನನ್ನನ್ನು ಆಕರ್ಷಿಸಿದವು.
ಪ್ರಶ್ನೆ: ಕೃಷ್ಣಗಿರಿ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಭರವಸೆ ಏನು?
ಉತ್ತರ: ಬೆಂಗಳೂರು ಮೆಟ್ರೊ ರೈಲು ಸೇವೆಯನ್ನು ಹೊಸೂರಿಗೆ ವಿಸ್ತರಿಸಬೇಕು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಅದೇ ರೀತಿ ಹೊಸೂರಿನಲ್ಲಿಯೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಲು ಬಯಸುತ್ತೇನೆ. ಈ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಶೇ.80 ರಷ್ಟು ಉದ್ಯೋಗ ನೀಡಬೇಕು ಎಂಬ ಕಾನೂನು ರೂಪಿಸಬೇಕು ಎಂದು ನಾನು ಧ್ವನಿ ಎತ್ತುತ್ತೇನೆ.
ಇದನ್ನೂ ಓದಿ:1200 ಜನರಿರುವ ದೊಡ್ಡದಾದ ಕುಟುಂಬದಲ್ಲಿದ್ದಾರೆ 350 ಮತದಾರರು!: ಇವರಿರುವುದು ಎಲ್ಲಿ ಗೊತ್ತಾ? - Assam family has nearly 350 voters