ನವದೆಹಲಿ: ಸಿಪಿಐ(ಎಂ) ದಿವಂಗತ ಶಾಸಕ ಕೆ.ಕೆ.ರಾಮಚಂದ್ರನ್ ನಾಯರ್ ಅವರ ಪುತ್ರನಿಗೆ ಸರಕಾರಿ ಉದ್ಯೋಗ ನೀಡುವ ಕೇರಳ ಸಚಿವ ಸಂಪುಟದ ನಿರ್ಧಾರವನ್ನು ರದ್ದುಗೊಳಿಸಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಸಚಿವ ಸಂಪುಟದ ನಿರ್ಧಾರವನ್ನು 2021ರಲ್ಲಿ ಹೈಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪಿಗೆ ತಡೆ ನೀಡುವಂತೆ ಕೋರಿ ಕೇರಳದ ವಿಜಯನ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠವು ಸೋಮವಾರ ಕೇರಳ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ.
ನಾಯರ್ ಅವರ ಪುತ್ರ ಆರ್.ಪ್ರಶಾಂತ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ 2018ರಿಂದ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದಿನಿಂದ ಈವರೆಗೆ ಅವರು ಪಡೆದಿರುವ ವೇತನ ಮತ್ತು ಭತ್ಯೆಗಳನ್ನು ಸರ್ಕಾರಕ್ಕೆ ಮರುಪಾವತಿಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
2018ರಲ್ಲಿ ಅವರ ತಂದೆ ನಿಧನರಾದ ನಂತರ ಪ್ರಶಾಂತ್ ಅವರನ್ನು ಸರ್ಕಾರಿ ಹುದ್ದೆಗೆ ನೇಮಿಸಲಾಗಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಪಾಲಕ್ಕಾಡ್ನ ಅಶೋಕ್ ಕುಮಾರ್ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಶಾಸಕರು ಕೇವಲ ಐದು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುವುದರಿಂದ ಅವರನ್ನು ಸರ್ಕಾರಿ ನೌಕರನೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಹೇಳಿತ್ತು. ಹೀಗಾಗಿ ಡೈಯಿಂಗ್ ಇನ್ ಹಾರ್ನೆಸ್ ಮೋಡ್ ಅಡಿಯಲ್ಲಿ ಸರ್ಕಾರಿ ಉದ್ಯೋಗ ನೀಡುವಂತಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್ ನೇಮಕಾತಿಯನ್ನು ರದ್ದುಗೊಳಿಸಿತ್ತು.
ಈ ನೇಮಕಾತಿಯು ಕೆಟ್ಟ ಸಂಪ್ರದಾಯವೊಂದನ್ನು ಹುಟ್ಟು ಹಾಕುವಂತಿದ್ದು, ಪಂಚಾಯತ್ ಅಧ್ಯಕ್ಷರಿಂದ ಹಿಡಿದು ವಿವಿಧ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ಮಕ್ಕಳನ್ನು ಸರ್ಕಾರದ ಹುದ್ದೆಗಳಿಗೆ ನೇಮಿಸಲು ರಾಜ್ಯ ಸರ್ಕಾರಕ್ಕೆ ಮುಕ್ತ ಅವಕಾಶ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಗಮನ ಸೆಳೆದಿದೆ.
ಸರ್ಕಾರದ ನಿರ್ಧಾರವು ಸಂವಿಧಾನದ 14 ಮತ್ತು 16ನೇ ವಿಧಿಗಳ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಮತ್ತು ಅದನ್ನು ಎತ್ತಿಹಿಡಿದರೆ, ಸಮಾನತೆ ಮತ್ತು ಕಾನೂನುಗಳ ಸಮಾನ ರಕ್ಷಣೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತದೆ ಹಾಗೂ ಅರ್ಹ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಪಡೆಯಲು ಕಾಯುವಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ನ ಈ ತೀರ್ಪು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ನ ಆದೇಶವನ್ನು ಎತ್ತಿ ಹಿಡಿದಿದೆ.
ಮೊದಲ ಬಾರಿಗೆ ಶಾಸಕರಾಗಿದ್ದ ನಾಯರ್ 2016ರ ವಿಧಾನಸಭಾ ಚುನಾವಣೆಯಲ್ಲಿ ಚೆಂಗನೂರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಇವರು ಅನಾರೋಗ್ಯದಿಂದಾಗಿ 2018ರಲ್ಲಿ ನಿಧನರಾದರು. ನಂತರ ಇವರ ಮಗ ಪ್ರಶಾಂತ ಎಂಬವರಿಗೆ ಸರ್ಕಾರಿ ನೌಕರಿ ನೀಡಲಾಗಿತ್ತು.
ಇದನ್ನೂ ಓದಿ : ಮರ್ಯಾದಾ ಹತ್ಯೆಗೆ ಮಹಿಳಾ ಕಾನ್ಸ್ಟೇಬಲ್ ಬಲಿ: ನಡುರಸ್ತೆಯಲ್ಲೇ ತಮ್ಮನಿಂದ ಕ್ರೌರ್ಯ