Jayden Seales: ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ 201 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿರುವ ಕೆರಿಬಿಯನ್ನರು ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾವನ್ನು ಕೇವಲ 164 ರನ್ಗಳಿಗೆ ಕಟ್ಟಿಹಾಕಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಾರೆ. ಜೊತೆಗೆ, ಇದೇ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಜೇಡನ್ ಸೀಲ್ಸ್ ಟೀಂ ಇಂಡಿಯಾ ಬೌಲರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದರು.
ಸೀಲ್ಸ್ ತಮ್ಮ ಮಾರಕ ಬೌಲಿಂಗ್ನಿಂದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 15.5 ಓವರ್ಗಳ ಬೌಲ್ ಮಾಡಿ ಕೇವಲ 5 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಅವರ ಈ ಓವರ್‌ಗಳಲ್ಲಿ 10 ಮೇಡನ್ ಗಳಿರುವುದು ಗಮನಾರ್ಹ. ಒಟ್ಟಾರೆ ತಮ್ಮ ಓವರ್ನಲ್ಲಿ ಸೀಲ್ಸ್ ಪ್ರತೀ ಓವರ್‌ಗೆ 0.31 ಸರಾಸರಿಯಲ್ಲಿ ರನ್ ನೀಡಿದ್ದಾರೆ.
Jayden Seales delivered a masterclass and stands tall amongst the best in the World!#WIvBAN #WIHomeForChristmas pic.twitter.com/bHqdrbz1O1
— Windies Cricket (@windiescricket) December 1, 2024
ಈ ಹಿಂದೆ ಇಂತಹ ಅಪರೂಪದ ಸಾಧನೆ ಮಾಡಿದ ದಾಖಲೆ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಹೆಸರಿನಲ್ಲಿತ್ತು. 2015ರಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ 21 ಓವರ್ ಬೌಲಿಂಗ್ ಮಾಡಿ ಕೇವಲ 9 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಂದು ಟೀಂ ಇಂಡಿಯಾದ ವೇಗಿ ಪ್ರತೀ ಓವರ್‌ಗೆ ಕೇವಲ 0.41 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.
ಇದರೊಂದಿಗೆ ಸೀಲ್ಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಎಕಾನಮಿಯಲ್ಲಿ ಸ್ಪೆಲ್ ಮಾಡಿದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದಷ್ಟೇ ಅಲ್ಲದೇ, ಓರ್ವ ಬೌಲರ್ ಅತ್ಯಂತ ಕಡಿಮೆ ಎಕಾನಮಿಯೊಂದಗೆ ಬೌಲಿಂಗ್ ಮಾಡಿರುವುದು 46 ವರ್ಷಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲು. 1978ರಿಂದ ಯಾವುದೇ ಬೌಲರ್ ಟೆಸ್ಟ್‌ನಲ್ಲಿ 0.4ಕ್ಕಿಂತ ಕಡಿಮೆ ಎಕಾನಮಿಯಲ್ಲಿ ಬೌಲಿಂಗ್ ಮಾಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಸೀಲ್ಸ್ 0.32ರ ಆರ್ಥಿಕತೆಯಲ್ಲೇ ಬೌಲ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಆದರೆ, ಸಾರ್ವಕಾಲಿಕ ದಾಖಲೆಯನ್ನು ಗಮನಿಸಿದರೆ ಈ ಪಟ್ಟಿಯಲ್ಲಿ ಭಾರತದ ಮಾಜಿ ಬೌಲರ್ ಬಾಪು ನಾಡಕರ್ಣಿ ಅಗ್ರಸ್ಥಾನದಲ್ಲಿದ್ದಾರೆ. 1964ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅವರು 32 ಓವರ್‌ಗಳಲ್ಲಿ 27 ಮೇಡನ್ ಮಾಡಿ ಕೇವಲ 5 ರನ್ ಬಿಟ್ಟುಕೊಟ್ಟಿದ್ದರು. ಈ ದಾಖಲೆಯನ್ನೂ ಇಂದಿಗೂ ಯಾವೊಬ್ಬ ಬೌಲರ್ ಕೂಡಾ ಮುರಿಯಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: RCBಯ ಈ ಡೇಂಜರಸ್ ಬೌಲರ್ ಚಿನ್ನಸ್ವಾಮಿ ಮೈದಾನದಲ್ಲಿ ಒಂದೇ ಒಂದು ಪಂದ್ಯ ಆಡಿಲ್ಲ!