ಡಮಾಸ್ಕಸ್: ಉತ್ತರದ ಅಲೆಪ್ಪೊ ಮತ್ತು ಇದ್ಲಿಬ್ ಪ್ರಾಂತ್ಯಗಳಲ್ಲಿ ಬಂಡುಕೋರ ಪಡೆಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಾಗಿ ಸಿರಿಯನ್ ಸೇನೆ ಸೋಮವಾರ ಪ್ರಕಟಿಸಿದ್ದು, ರಷ್ಯಾದ ಪಡೆಗಳ ಬೆಂಬಲದೊಂದಿಗೆ ಕಳೆದ 24 ಗಂಟೆಗಳಲ್ಲಿ 400ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಹೇಳಿಕೊಂಡಿದೆ.
ಸೇನೆ ಮತ್ತು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೇಂದ್ರೀಕೃತ ವಾಯು, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳ ಮೂಲಕ 'ಭಯೋತ್ಪಾದಕರಿಗೆ' ಸೇರಿದ ಐದು ಕಮಾಂಡ್ ಕೇಂದ್ರಗಳು ಮತ್ತು ಏಳು ಮದ್ದುಗುಂಡು ಡಿಪೋಗಳನ್ನು ನಾಶಪಡಿಸಲಾಗಿದೆ ಎಂದು ಮಿಲಿಟರಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಕಳೆದ 24 ಗಂಟೆಗಳಲ್ಲಿ ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಪರ ರಷ್ಯಾದ ಪಡೆಗಳ ಸಹಕಾರದೊಂದಿಗೆ ನಮ್ಮ ಸಶಸ್ತ್ರ ಪಡೆಗಳು ಅಲೆಪ್ಪೊ ಮತ್ತು ಇದ್ಲಿಬ್ನ ಗ್ರಾಮೀಣ ಪ್ರದೇಶಗಳಲ್ಲಿ ಭಯೋತ್ಪಾದಕ ನೆಲೆಗಳು, ಅವರ ಗೋದಾಮುಗಳು, ಸರಬರಾಜು ಮಾರ್ಗಗಳು ಮತ್ತು ಸಂಚಾರ ಮಾರ್ಗಗಳ ಮೇಲೆ ವೈಮಾನಿಕ, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ಮುಂದುವರಿಸಿವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಗಂಟೆಗಳಲ್ಲಿ ನಿಖರವಾದ ದಾಳಿಯಲ್ಲಿ ವಿವಿಧ ದೇಶಗಳಿಗೆ ಸೇರಿದ 400ಕ್ಕೂ ಹೆಚ್ಚು ಉಗ್ರರನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.
ಇರಾನ್ ಬೆಂಬಲಿತ ಮಿಲಿಶಿಯಾ ಹೋರಾಟಗಾರರು ರಾತ್ರೋರಾತ್ರಿ ಇರಾಕ್ನಿಂದ ಸಿರಿಯಾಗೆ ಪ್ರವೇಶಿಸಿದ್ದು, ದಂಗೆಕೋರರ ವಿರುದ್ಧ ಹೋರಾಡುತ್ತಿರುವ ಸಿರಿಯನ್ ಸೇನಾ ಪಡೆಗಳೊಂದಿಗೆ ಕೈಜೋಡಿಸಲು ಉತ್ತರ ಸಿರಿಯಾಕ್ಕೆ ತೆರಳುತ್ತಿವೆ ಎಂದು ಸಿರಿಯನ್ ಸೇನಾ ಮೂಲಗಳು ರಾಯಿಟರ್ಸ್ಗೆ ತಿಳಿಸಿವೆ.
ಇರಾಕ್ನಿಂದ ನೂರಾರು ಇರಾನ್-ಅಲಿಪ್ತ ಇರಾಕಿ ಹಶ್ದ್ ಅಲ್ ಶಾಬಿ ಹೋರಾಟಗಾರರು ಅಲ್ ಬುಕಮಲ್ ಕ್ರಾಸಿಂಗ್ ಬಳಿಯ ಮಿಲಿಟರಿ ಮಾರ್ಗದ ಮೂಲಕ ಸಿರಿಯಾಕ್ಕೆ ಪ್ರವೇಶಿಸಿದ್ದಾರೆ ಎಂದು ಸಿರಿಯಾದ ಹಿರಿಯ ಸೇನಾ ಮೂಲವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಸಿರಿಯಾದ ಎರಡನೇ ಅತಿದೊಡ್ಡ ನಗರವಾದ ಅಲೆಪ್ಪೊವನ್ನು ಸದ್ಯ ಬಂಡುಕೋರರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಅಲೆಪ್ಪೊದಿಂದ ಬಂಡುಕೋರರನ್ನು ಹೊರಹಾಕಲು ಅಸ್ಸಾದ್ ಸರ್ಕಾರಕ್ಕೆ ರಷ್ಯಾ ಮತ್ತು ಇರಾನ್ ಬೆಂಬಲ ನೀಡುತ್ತಿವೆ.
2011ರಲ್ಲಿ ಪ್ರಜಾಪ್ರಭುತ್ವ ಸರ್ಕಾರಕ್ಕೆ ಆಗ್ರಹಿಸಿ ಸಿರಿಯಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆದರೆ ಅಸಾದ್ ಈ ಪ್ರತಿಭಟನೆಗಳನ್ನು ದಬ್ಬಾಳಿಕೆಯ ಮೂಲಕ ಮಟ್ಟ ಹಾಕಿದ್ದರು. ಭೀಕರ ಸಂಘರ್ಷದಲ್ಲಿ ಈವರೆಗೆ ಸುಮಾರು 5 ಲಕ್ಷ ಜನ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಹಿಜ್ಬುಲ್ಲಾದಿಂದ ಕದನವಿರಾಮ ಉಲ್ಲಂಘನೆ ಆರೋಪ: ಲೆಬನಾನ್ ಮೇಲೆ ಮತ್ತೆ ಇಸ್ರೇಲ್ ದಾಳಿ