ನವದೆಹಲಿ:ಪುಣ್ಯಸ್ನಾನ ಮಾಡಿದರೆ ದೇಶದ ಬಡತನ ನಿವಾರಣೆಯಾಗುತ್ತಾ ಎಂದು ಹಿಂದೂ ಧರ್ಮದ ಐತಿಹಾಸಿಕ ಮಹಾ ಕುಂಭಮೇಳವನ್ನು ಪ್ರಶ್ನಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಜನವರಿ 29ರಂದು ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ "ಸಾವಿರಾರು ಜನರು" ಸಾವಿಗೀಡಾಗಿದ್ದಾರೆ. ಅವರಿಗೆ ನನ್ನ ಸಂತಾಪಗಳು ಎಂದು ಇಂದು ರಾಜ್ಯಸಭೆಯಲ್ಲಿ ಹೇಳಿದರು. ಇದಕ್ಕೆ ಉಪರಾಷ್ಟ್ರಪತಿಯೂ ಆಗಿರುವ ಸಭಾಪತಿ ಜಗದೀಪ್ ಧನಕರ್ ಸೇರಿದಂತೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ಉಂಟಾಯಿತು.
ಆಕ್ಷೇಪಕ್ಕೆ ಕಾರಣವೇನು?:ರಾಜ್ಯಸಭೆಯ ವಿಪಕ್ಷ ನಾಯಕ ಖರ್ಗೆ ಸೋಮವಾರ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ, ಮಹಾ ಕುಂಭಮೇಳದಲ್ಲಿ ಮಡಿದ ಸಾವಿರಾರು ಜನರಿಗೆ ನನ್ನ ಸಂತಾಪಗಳು ಎಂದರು. ತಕ್ಷಣವೇ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಎನ್ಡಿಎ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನದ ಮೂಲಕ ದೇಶಕ್ಕೆ ಖರ್ಗೆ ಅವರು ಸುಳ್ಳು ಮತ್ತು ಭೀತಿ ಹುಟ್ಟಿಸುವ ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಧನಕರ್, ತಮ್ಮ ಸಾವಿರಾರು ಜನರ ಸಾವು ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಖರ್ಗೆ ಅವರಿಗೆ ಸೂಚಿಸಿದರು. ಇದಕ್ಕುತ್ತರವಾಗಿ ಮಾತನಾಡಿದ ಎಐಸಿಸಿ ಅಧ್ಯಕ್ಷರು, "ಇದು ನನ್ನ ಅಂದಾಜು ಲೆಕ್ಕ. ತಪ್ಪಾಗಿದ್ದರೆ, ಸರ್ಕಾರ ನಿಜವಾದ ಲೆಕ್ಕ ಕೊಡಲಿ. ಸತ್ಯ ಏನೆಂದು ಅವರೇ ಹೇಳಬೇಕು. ಆಗ ನನ್ನ ಹೇಳಿಕೆಯನ್ನು ಸರಿಪಡಿಸಿಕೊಳ್ಳುವೆ" ಎಂದರು.
ಸರ್ಕಾರ ಸರಿಯಾದ ಅಂಕಿಅಂಶ ನೀಡಲಿ-ಖರ್ಗೆ:ನಾನು ಯಾರನ್ನೂ ದೂಷಿಸಲು ಸಾವಿರಾರು ಜನರ ಸಾವು ಎಂದು ಹೇಳಿಲ್ಲ. ಆದರೆ, ಎಷ್ಟು ಭಕ್ತರು ಅಂದು ಮೃತಪಟ್ಟರು ಎಂಬ ಬಗ್ಗೆ ಮಾಹಿತಿ ನೀಡಿ. ನನ್ನ ಲೆಕ್ಕ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಎಷ್ಟು ಸಾವು, ಗಾಯ ಮತ್ತು ಕಾಣೆಯಾಗಿದ್ದಾರೆ ಎಂಬ ಅಂಕಿಅಂಶವನ್ನು ಸರ್ಕಾರ ನೀಡಲಿ" ಎಂದು ಹೇಳಿದರು.
ಸಭಾಪತಿ ಧನಕರ್ ಮಾತನಾಡಿ, "ನೀವು ನೀಡುವ ಹೇಳಿಕೆ ತುಂಬಾ ಗಂಭೀರವಾಗಿದೆ. ಸದಸ್ಯರು ಆಡುವ ಮಾತುಗಳನ್ನು ದೇಶ ಗಮನಿಸುತ್ತದೆ. ಸರಿಯಾದ ಅಂಕಿಅಂಶಗಳನ್ನು ಮಾತ್ರ ಪ್ರಸ್ತಾಪಿಸಿ. ನಿಮ್ಮ ಹೇಳಿಕೆಯು ತುಂಬಾ ದುಃಖ ತರಿಸಿದೆ. ಮಾತು ಹಿಂಪಡೆಯಿರಿ" ಎಂದರು.