ಶ್ರೀನಗರ (ಜಮ್ಮು- ಕಾಶ್ಮೀರ) :ಆರು ವರ್ಷಗಳ ರಾಷ್ಟ್ರಪತಿ ಆಳ್ವಿಕೆಯ ಬಳಿಕ ಮೊದಲ ಬಾರಿಗೆ ಇಲ್ಲಿನ ಸೂಕ್ಷ್ಮ ಪ್ರದೇಶವಾಗಿರುವ ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಾಡಿತು. ಉಪ ಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ಅವರು ಬಿಗಿಭದ್ರತೆಯ ನಡುವೆ ಧ್ವಜಾರೋಹಣ ಮಾಡಿದರು.
ಆರು ವರ್ಷಗಳ ಹಿಂದೆ (2019), 370ನೇ ವಿಧಿ ರದ್ದಿಗೂ ಮೊದಲು ಅಸ್ತಿತ್ವದಲ್ಲಿದ್ದ ರಾಜ್ಯ ಸರ್ಕಾರ ಪತನವಾದ ಬಳಿಕ ಹೇರಲಾದ ರಾಷ್ಟ್ರಪತಿ ಆಳ್ವಿಕೆಯ ಅವಧಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್ ಅವರು ಧ್ವಜಾರೋಹಣ ಮಾಡಿದ್ದರು. ಅದಾದ ಬಳಿಕ ಇಲ್ಲಿ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜ ಹಾರಾಡಿರಲಿಲ್ಲ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಉಗ್ರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಶ್ರೀನಗರದ ಬಕ್ಷಿ ಕ್ರೀಡಾಂಗಣದ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿತ್ತು. ಪಾಸ್ ಹೊಂದಿದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿತ್ತು. ಶೂನ್ಯ ತಾಪಮಾನದಿಂದಾಗಿ ಅತಿಯಾದ ಚಳಿಯ ನಡುವೆಯೂ ಅಧಿಕಾರಿಗಳು, ಜನರು ಕಾರ್ಯಕ್ರಮದಲ್ಲಿ ಭಾಗಿಯಾದರು.
ರಾಜ್ಯ ಸ್ಥಾನಮಾನ ಪುನಃಸ್ಥಾಪನೆ :ಧ್ವಜಾರೋಹಣ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಡಿಸಿಎಂ ಚೌಧರಿ ಅವರು, ಜಮ್ಮು- ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನ ಪುನಃಸ್ಥಾಪನೆ, ಸ್ಥಳೀಯರಿಗೆ ಭೂಮಿ ಮತ್ತು ಉದ್ಯೋಗ ಹಕ್ಕು ದೊರಕಿಸಿಕೊಡುವುದು ಸರ್ಕಾರದ ಗುರಿಯಾಗಿದೆ. ಕಾಶ್ಮೀರಿ ಪಂಡಿತರ ಪುನರ್ವಸತಿ ಮತ್ತು ಅವರನ್ನು ಮರಳಿ ತರುವುದು ಕೂಡ ಆದ್ಯತೆಯಾಗಿದೆ ಎಂದು ತಿಳಿಸಿದರು.