ಕರ್ನಾಟಕ

karnataka

ETV Bharat / bharat

ದೆಹಲಿ ಚಲೋ ಹೋರಾಟ: ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್​ ವಶಕ್ಕೆ, ಉಜ್ಜಯಿನಿಗೆ ಸ್ಥಳಾಂತರ - ದೆಹಲಿ ಚಲೋ ಹೋರಾಟ

ದೆಹಲಿ ಚಲೋ ಹೋರಾಟಕ್ಕೆ ತೆರಳುತ್ತಿದ್ದ ಕರ್ನಾಟಕದ ರೈತ ಮುಖಂಡರನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೊಲೀಸರು ವಶಕ್ಕೆ ಪಡೆದು ಉಜ್ಜಯಿನಿಗೆ ಸ್ಥಳಾಂತರಿಸಿದ್ದಾರೆ.

karnataka-farmers-detained-in-madhya-pradesh-who-going-to-delhi-chalo-protest
ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್​ ವಶಕ್ಕೆ, ಉಜ್ಜಯಿನಿಗೆ ಸ್ಥಳಾಂತರ

By ETV Bharat Karnataka Team

Published : Feb 13, 2024, 5:44 PM IST

ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್​ ವಶಕ್ಕೆ

ಉಜ್ಜಯಿನಿ (ಮಧ್ಯಪ್ರದೇಶ): ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ರೈತರು ದೆಹಲಿ ಚಲೋ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾಗಲು ಕರ್ನಾಟಕದಿಂದ ತೆರಳುತ್ತಿದ್ದ ರೈತ ಮುಖಂಡರನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೊಲೀಸರು ತಡೆದಿದ್ದಾರೆ.

ಕರ್ನಾಟಕದ ಸುಮಾರು 70 ರೈತರು ರೈಲಿನಲ್ಲಿ ದೆಹಲಿಗೆ ಹೊರಟಿದ್ದರು. ಆದರೆ, ರೈಲು ಭೋಪಾಲ್‌ ತಲುಪುತ್ತಿದ್ದಂತೆ ಪೊಲೀಸರು ಆಗಮಿಸಿ ಎಲ್ಲ ರೈತರನ್ನು ಇಳಿಸಿದ್ದಾರೆ. ಅಲ್ಲಿಂದ ಉಜ್ಜಯಿನಿಗೆ ರೈಲಿನಲ್ಲಿ ಅವರನ್ನು ಹತ್ತಿಸಿ ಕಳುಹಿಸಲಾಗಿದೆ. ಅಲ್ಲದೇ, ಭಾರೀ ಪೊಲೀಸ್​ ಭದ್ರತೆಯೊಂದಿಗೆ ರೈತರನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಇಳಿಸಲಾಗಿದೆ. ಇಲ್ಲಿಂದ ಶಿಪ್ರಾ ನದಿಯಲ್ಲಿ ಸ್ನಾನ ಮಾಡಲು ಎಲ್ಲ ರೈತರನ್ನು ಪೊಲೀಸ್ ವಾಹನದಲ್ಲಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ.

ಮತ್ತೊಂದೆಡೆ, ಕರ್ನಾಟಕದ ರೈತರನ್ನು ಪೊಲೀಸರು ಉಜ್ಜಯಿನಿಗೆ ಕರೆತಂದ ವಿಷಯ ಅರಿತ ಕೆಲ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಆಗಮಿಸಿ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ, ಕೆಲ ಮುಖಂಡರು ಮಾತನಾಡಿ, ತಮ್ಮನ್ನು ಪೊಲೀಸರು ಬಲವಂತವಾಗಿ ರೈಲಿನಿಂದ ಕೆಳಗಿಳಿಸಿದ್ದಾರೆ. ಅಲ್ಲದೇ, ಕರ್ನಾಟಕಕ್ಕೆ ವಾಪಸ್ ಹೋಗುವಂತೆ ಸೂಚಿಸಿದ್ದರು. ಆದರೆ, ನಾವು ದೆಹಲಿಗೆ ಹೋಗಬೇಕೆಂದು ಪಟ್ಟು ಹಿಡಿದಾಗ ಉಜ್ಜಯಿನಿಗೆ ಸ್ಥಳಾಂತರ ಮಾಡಿದ್ದಾರೆ ಎಂದು ದೂರಿದ್ದಾರೆ.

''ನಾವೆಲ್ಲ ದೆಹಲಿಗೆ ತೆರಳುತ್ತಿದ್ದೇವೆ. ಆದರೆ, ಭೋಪಾಲ್​ನಲ್ಲಿ ಎಸಿಪಿ ನೇತೃತ್ವದಲ್ಲಿ ಪೊಲೀಸರು ಬಲವಂತವಾಗಿ ನಮ್ಮನ್ನು ತಡೆದಿದ್ದಾರೆ. ರೈಲಿನಿಂದ ಎಳೆದು ಕೆಳಗಿಳಿಸಿದ್ದಾರೆ. ಈ ಸಂದರ್ಭದಲ್ಲಿ ನನ್ನ ತಲೆ, ಕಾಲಿಗೆ ಪೆಟ್ಟು ಬಿದ್ದಿವೆ. ರಾತ್ರಿಯಿಡೀ ನಮಗೆ ಪೊಲೀಸರು ತುಂಬಾ ತೊಂದರೆ ಕೊಟ್ಟಿದ್ದಾರೆ. ಈ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು'' ಎಂದು ಕರ್ನಾಟಕದ ರೈತ ಮಹಿಳೆ ಪದ್ಮ ಶಾಂತಕುಮಾರ್ ಒತ್ತಾಯಿಸಿದರು.

ಧಾರವಾಡದ ರೈತ ಸಂಘಟನೆಯೊಂದರ ಕಾರ್ಯದರ್ಶಿಯಾದ ಪರಶುರಾಮ್​ ಮಾತನಾಡಿ, ''ದೆಹಲಿಗೆ ಹೋಗಲು ಮಧ್ಯಪ್ರದೇಶ ಪೊಲೀಸರು ಅವಕಾಶ ಕೊಡುತ್ತಿಲ್ಲ. ಕರ್ನಾಟಕದಿಂದ ಬಂದ ನಮ್ಮನ್ನು ದೆಹಲಿಗೆ ತೆರಳಲು ಬಿಡುತ್ತಿಲ್ಲ. ಬದಲಿಗೆ ನಮ್ಮನ್ನು ಉಜ್ಜಯಿನಿಗೆ ಸ್ಥಳಾಂತರ ಮಾಡಿದ್ದಾರೆ'' ಎಂದು ಹೇಳಿದರು. ಮತ್ತೊಂದೆಡೆ, ದೆಹಲಿಯಲ್ಲಿ ರೈತರ ಚಳವಳಿಯ ಹಿನ್ನೆಲೆಯಲ್ಲಿ ಉಜ್ಜಯಿನಿ, ದೆಹಲಿ, ಪಂಜಾಬ್, ಹರಿಯಾಣ ಮತ್ತು ಚಂಡೀಗಢ ಮತ್ತು ಇತರ ರಾಜ್ಯಗಳ ಗಡಿಗಳನ್ನು ಮುಚ್ಚಲಾಗಿದೆ. ಇದರ ನಡುವೆಯೂ ರೈತರು ದೆಹಲಿಗೆ ಹೋಗುವ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.

ರೈತರು ಪಾದಯಾತ್ರೆ, ಟ್ರಾಕ್ಟರ್​ಗಳು ಮತ್ತ ಇತರ ವಾಹನಗಳ ಮೂಲಕ ದೆಹಲಿಯತ್ತ ಸಾಗಿದ್ದಾರೆ. ಇದರಿಂದ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ. ಇದರ ನಡುವೆ ಚಂಡೀಗಢದ ಅಂಬಾಲಾದ ಶಂಭು ಗಡಿಯಲ್ಲಿ ರಸ್ತೆ ಹಾಕಿದ್ದ ಬ್ಯಾರಿಕೇಡ್​ಗಳನ್ನು ರೈತರು ತೆಗೆದುಹಾಕಲು ಮುಂದಾಗಿದ್ದರು. ಈ ವೇಳೆ, ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳ ಮೂಲಕ ಬಲಪ್ರಯೋಗ ಮಾಡಿ ರೈತರನ್ನು ತಡೆಯಲು ಯತ್ನಿಸಿದ್ದಾರೆ.

ಇದನ್ನೂ ಓದಿ:ಕ್ರೀಡಾಂಗಣ ಜೈಲಾಗಿ ಪರಿವರ್ತಿಸಲ್ಲ ಎಂದ ದೆಹಲಿ ಸರ್ಕಾರ; ರೈತರ ಮೇಲೆ ಆಶ್ರುವಾಯು ಸಿಡಿಸಿದ ಪೊಲೀಸರು

ABOUT THE AUTHOR

...view details